ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಸಾರ್ವಜನಿಕರು ಆರೋಗ್ಯ ಇಲಾಖೆ ಸೇವೆ, ಸೌಲಭ್ಯ ಪಡೆದು ಉತ್ತಮ ಆರೋಗ್ಯ ರೂಪಿಸಿಕೊಳ್ಳಲೆಂದು ಜಿಲ್ಲೆಯಾದ್ಯಂತ 41 ಪ್ರಾಥಮಿಕ ಆರೋಗ್ಯ ಕೇಂದ್ರ, 5 ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಮೊದಲ ಬುಧವಾರ ಆರೋಗ್ಯ ಮೇಳ ಹಮ್ಮಿಕೊಳ್ಳುತ್ತಿದೆ (ಬುಧವಾರ ರಜೆ ದಿನ ಇದ್ದಲ್ಲಿ ಶುಕ್ರವಾರ) ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ ತಿಳಿಸಿದರು.ಸಮೀಪದ ಬಳಿಚಕ್ರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ನಡೆದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
ಮೇಳದಲ್ಲಿ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಕುರಿತು ಮಾಹಿತಿ, ತಪಾಸಣೆ, ಪರೀಕ್ಷೆ, ಚಿಕಿತ್ಸೆ, ರಾಷ್ಟ್ರೀಯ ಆರೋಗ್ಯ ದಿನಗಳ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ವಿಶ್ವ ಮುಟ್ಟಿನ ದಿನಾಚರಣೆ ಕುರಿತು ಮಾಹಿತಿ ನೀಡಿ ಹದಿಹರೆಯದವರೂ ಸೇರಿ ಮಹಿಳೆಯರು ಋತುಕಾಲದ ಸಮಯದಲ್ಲಿ ಉತ್ತಮ ಶುಚಿತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ ಮಾತನಾಡಿ, ಆರೋಗ್ಯ ಮೇಳದಲ್ಲಿ ಎಲ್ಲಾ ಆರೋಗ್ಯ ಸೇವೆ, ಸೌಲಭ್ಯ ಸಂಪೂರ್ಣ ಉಚಿತ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು.ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಸ್. ಪಾಟೀಲ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಸಾಜೀದ್ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ ಮಾತನಾಡಿದರು.ಯಾದಗಿರಿ ಟಿ.ಎಚ್.ಓ ಡಾ. ಹಣಮಂತರೆಡ್ಡಿ, ಪಿಡಿಓ ಅನುರಾಧಾ, ಶಾಂತಿಲಾಲ, ಡಾ. ರಶೀದ, ಮಹಾಲಕ್ಷ್ಮಿ, ಶೀಭಾರಾಣಿ, ಸುದರ್ಶನ, ರತ್ನಮ್ಮ, ಪ್ರಮೀಳಾ, ಪರಮೇಶ್ವರ, ರವಿಬಂಡಿ, ಕಂದಕೂರ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಜ್ಯೋತಿ ಹಾಗೂ ಸಹನಾ ಮುಂತಾದವರಿದ್ದರು.
ಸ್ವರ ಸಾಮ್ರಾಟ ಜಾನಪದ ಕಲಾ ತಂಡದವರಿಂದ ಬೀದಿ ನಾಟಕದ ಮುಖಾಂತರ ಅರಿವು ಮೂಡಿಸಲಾಯಿತು. ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ನಿರೂಪಿಸಿದರು. ಬಳಿಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಮದ್ದಾಸೀರ ಸ್ವಾಗತಿಸಿದರು. ಡಿ.ಪಿ.ಎಂ. ಮನೋಹರ ವಂದಿಸಿದರು.