ಸಾರಾಂಶ
ನಿಗದಿತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಹನೂರು ತಾಲೂಕಿನ ಚೆನ್ನಾಲಿಂಗನ ಹಳ್ಳಿ ಗ್ರಾಮದ ಬಳಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹನೂರು
ಶಾಲಾ ಕಾಲೇಜಿಗೆ ತೆರಳಲು ನಿಗದಿತ ಸಮಯಕ್ಕೆ ಸಾರಿಗೆ ವಾಹನ ಸಿಗದೇ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಚೆನ್ನಾಲಿಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ಜರುಗಿತು.ತಾಲೂಕಿನ ಚೆನ್ನಾಲಿಂಗನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಕೊಳ್ಳೇಗಾಲ ಚಾಮರಾಜನಗರ ವಿವಿಧ ಕಾಲೇಜುಗಳಿಗೆ ಹೋಗಿ ಬರಲು ನಿಗದಿತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಬೆಳಗ್ಗೆ ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಬಸ್‌ಗಳಿಗೆ ಒತ್ತಾಯ:ಕಳೆದ ಹಲವಾರು ತಿಂಗಳಿಂದ ಈ ಭಾಗದಲ್ಲಿ ಬಸ್ಸಿನ ಸೌಕರ್ಯ ವ್ಯವಸ್ಥೆ ಇಲ್ಲದೆ ಈ ಭಾಗದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸಾರಿಗೆ ವಾಹನದ ವ್ಯವಸ್ಥಾಪಕರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಸಹ ಈ ಭಾಗದಲ್ಲಿ ಶಾಲಾ ಕಾಲೇಜಿನ ಸಮಯದಲ್ಲಿ ಬಸ್ಸಿನ ವ್ಯವಸ್ಥೆ ಇಲ್ಲದೆ ನಿಗದಿತ ಸಮಯಕ್ಕೆ ಕಾಲೇಜಿಗೆ ತೆರಳಲು ಆಗದೆ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಗುಡ್ಡಗಾಡು ಪ್ರದೇಶ ಕಾಡಂಚಿನ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.ಹೆಚ್ಚುವರಿ ತಾತ್ಕಾಲಿಕ ಬಸ್ ವ್ಯವಸ್ಥೆಯನ್ನು ಸಾರಿಗೆ ಅಧಿಕಾರಿಗಳು ಕಲ್ಪಿಸಿದ ನಂತರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಪೋಷಕರ ಒತ್ತಾಯ: ಚಾ.ನಗರ, ಕೊಳ್ಳೇಗಾಲದಲ್ಲಿ ಕಾಲೇಜಿಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಹಲವಾರು ದಿನ ಮಕ್ಕಳು ಮನೆಯಲ್ಲಿ ಉಳಿದಿದ್ದಾರೆ. ಜೊತೆಗೆ ಕಾಲೇಜಿನಲ್ಲೂ ವ್ಯವಸ್ಥಾಪಕರ ಬಳಿ ಬೈದಿರುವ ಘಟನೆಗಳು ಸಹ ಜರುಗಿದೆ. ಹೀಗಾಗಿ ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ಕ್ರಮವಹಿಸಲು ಸಾರಿಗೆ ಅಧಿಕಾರಿಗಳನ್ನು ಪೋಷಕರು ಒತ್ತಾಯಿಸಿದ್ದಾರೆ.