ಹೆದ್ದಾರಿಯಲ್ಲಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ

| Published : Jul 08 2024, 12:31 AM IST

ಸಾರಾಂಶ

ಹಾರೋಡಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಈ ಬಾರಿ ಮಳೆ ಬಂದಾಗಲೆಲ್ಲಾ ರಸ್ತೆಯ ಮೇಲೆ ಸೊಂಟ ಮಟ್ಟಕ್ಕಿಂತ ಹೆಚ್ಚು ನೀರು ನಿಂತು ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ತೊಂದರೆಗೆ ಕಾರಣವಾಗಿತ್ತು.

ಕುಮಟಾ: ಪ್ರಸಕ್ತ ಸಾಲಿನ ಮೊದಲ ಮಳೆಗೇ ತಾಲೂಕಿನ ವಾಲಗಳ್ಳಿ ಪಂಚಾಯಿತಿ ವ್ಯಾಪ್ತಿಯ ಹಾರೋಡಿಯಲ್ಲಿ ಕುಮಟಾ- ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ನೀರು ಕಟ್ಟಿಕೊಂಡು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಮಳೆ ನೀರಿನ ಹರಿವಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಶಾಸಕ ದಿನಕರ ಶೆಟ್ಟಿ ಯಶಸ್ವಿಯಾಗಿದ್ದು, ಸ್ವತಃ ಸ್ಥಳದಲ್ಲಿ ನಿಂತು ಜನರ ಮನವೊಲಿಸಿ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.

ಹಾರೋಡಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಈ ಬಾರಿ ಮಳೆ ಬಂದಾಗಲೆಲ್ಲಾ ರಸ್ತೆಯ ಮೇಲೆ ಸೊಂಟ ಮಟ್ಟಕ್ಕಿಂತ ಹೆಚ್ಚು ನೀರು ನಿಂತು ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ತೊಂದರೆಗೆ ಕಾರಣವಾಗಿತ್ತು. ಇದೀಗ ಕಳೆದ ನಾಲ್ಕೈದು ದಿನದಿಂದ ಮಳೆ ತೀವ್ರವಾಗಿದ್ದರಿಂದ ಸಮಸ್ಯೆ ಉಲ್ಬಣಿಸಿದೆ. ರಸ್ತೆಯ ಇಕ್ಕೆಲಗಳಲ್ಲಿ ಜನವಾಹನ ಸಂಚಾರ ಹಗಲಿರುಳೆನ್ನದೇ ಅಕಾಲಿಕವಾಗಿ ಪದೇ ಪದೇ ಬಂದ್ ಆಗುತ್ತಿದ್ದರಿಂದ ಜನರು ಇನ್ನಿಲ್ಲದ ಕಿರಿಕಿರಿ ಅನುಭವಿಸಿದ್ದರು.

ಶನಿವಾರ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಸಮಸ್ಯೆಯ ಮೂಲವನ್ನು ಅರಿತರಲ್ಲದೇ ರಸ್ತೆಯಿಂದ ಮಳೆ ನೀರು ಹರಿದು ಹೋಗಲು ಸ್ಥಳೀಯರ ಮನ ಒಲಿಸುವ ಅಗತ್ಯವನ್ನು ಮನಗಂಡರು. ಎಲ್ಲರ ಅಭಿಪ್ರಾಯದಂತೆ ತುರ್ತು ಸಮಸ್ಯೆ ಬಗೆಹರಿಸಲು ಜೆಸಿಬಿ ತರಿಸಿ ಮೋರಿಯನ್ನು ಕೂಡಲೇ ಅಳವಡಿಸಿ ರಸ್ತೆಯ ಮೇಲೆ ನಿಲ್ಲುತ್ತಿದ್ದ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಹಾರೋಡಿಗೆ ಬಂದು ಸಮಸ್ಯೆ ವೀಕ್ಷಿಸಿ, ಆದೇಶಿಸಿದ್ದರೂ ಬಗೆಹರಿಯದ ಸಮಸ್ಯೆ ಶಾಸಕ ದಿನಕರ ಶೆಟ್ಟಿ ಅವರ ಸಮಯೋಚಿತ, ಮುತ್ಸದ್ಧಿಯ ಕಾರ್ಯದಿಂದ ಸಾಧ್ಯವಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರವೀಣ ಕರಾಂಡೆ, ಪಿಡಬ್ಲ್ಯುಡಿ ಎಂಜಿನೀಯರ್ ಸೋಮನಾಥ ಭಂಡಾರಿ ಇತರರು ಇದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಹಾರೋಡಿಯಲ್ಲಿ ರಸ್ತೆಯಲ್ಲಿ ನೀರು ತುಂಬಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಕಳೆದ ಕೆಲವು ದಿನದಿಂದ ಗಮನಿಸುತ್ತಿದ್ದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಹಿಂದಿನಿಂದಲೂ ಇತ್ತು. ಇಂದು ಸುತ್ತಲ ಸಾರ್ವಜನಿಕರ ಜತೆಗೆ ಮಾತುಕತೆ ನಡೆಸಿ, ಯೋಗ್ಯವಾದ ವ್ಯವಸ್ಥೆ ಮಾಡಿದ್ದೇವೆ. ಜನರಿಗೆ ಶಾಶ್ವತ ಪರಿಹಾರ ಒದಗಿಸುವ ಕಾರ್ಯ ಮಾಡುವ ಯೋಜನೆ ಇದೆ ಎಂದರು.