ನಶೆಯಲ್ಲಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

| Published : Feb 29 2024, 02:09 AM IST

ನಶೆಯಲ್ಲಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಪುರ ರೈಲು ನಿಲ್ದಾಣದಲ್ಲಿ ಸೋಮವಾರ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರತ ಮಂಡ್ಯ ಹೊರ ರೈಲ್ವೆ ಪೊಲೀಸ್ ಠಾಣೆ ಪೇದೆ ಎಸ್.ವಿ. ಸತೀಶ್‌ಚಂದ್ರ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ 143, 144, 307, 341, 353, 504 ಹಾಗೂ 149ರನ್ವಯ ಪ್ರಕರಣ ದಾಖಲು ಮಾಡಿಕೊಂಡ ನಂತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ರೈಲಿನಲ್ಲಿ ಗಾಂಜಾ ನಶೆಯಲ್ಲಿದ್ದ 6 ಮಂದಿ ಯುವಕರ ಗುಂಪು ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆಗೆ ಯತ್ನ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕಸ್ತೂರಿಬಾ ಅಂಚೆಪಾಳ್ಯ ನಗರದ ಕಾರ್ ಸೀಟ್ ಮೇಕರ್ ಇರ್ಫಾನ್ (19), ದ್ವಿಚಕ್ರ ವಾಹನ ಮೆಕ್ಯಾನಿಕ್ ದರ್ಶನ್ (21), ವಾಹನ ಚಾಲಕ ಮೊಹಮ್ಮದ್ ಇಮ್ರಾನ್ (21), ಬೆಂಗಳೂರು ಜೆ.ಜೆ.ಆರ್.ನಗರದ ಗೋಲ್ಡ್, ಸಿಲ್ವರ್ ಪಾಲೀಶ್ ಕೆಲಸಗಾರ ಫೈಜಲ್‌ಖಾನ್ (22), ಕಸ್ತೂರಿಬಾ ಅಂಚೇಪಾಳ್ಯನಗರದ ಮುನಿರಾಜ ಅಲಿಯಾಸ್ ಚಿನ್ನಿತಂದೆ (24), ಕಾಂಕ್ರಿಟ್ ಮಿಕ್ಸರ್ ಕೆಲಸಗಾರ ಮೋಹಿನ್‌ಪಾಷ (21) ಬಂಧಿತ ಆರೋಪಿಗಳು.

ಪಟ್ಟಣದ ಶಿವಪುರ ರೈಲು ನಿಲ್ದಾಣದಲ್ಲಿ ಸೋಮವಾರ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರತ ಮಂಡ್ಯ ಹೊರ ರೈಲ್ವೆ ಪೊಲೀಸ್ ಠಾಣೆ ಪೇದೆ ಎಸ್.ವಿ. ಸತೀಶ್‌ಚಂದ್ರ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ 143, 144, 307, 341, 353, 504 ಹಾಗೂ 149ರನ್ವಯ ಪ್ರಕರಣ ದಾಖಲು ಮಾಡಿಕೊಂಡ ನಂತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಲ್ಲ 6 ಮಂದಿ ಆರೋಪಿಗಳು ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ವಿಜಯಪುರಕ್ಕೆ ಹೋಗುತ್ತಿದ್ದ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೌಚಾಲಯದ ಬಳಿ ಕುಳಿತು ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದರಿಂದ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲು ತೊಂದರೆಯಾಗುತ್ತಿತ್ತು. ಈ ವೇಳೆ ರೈಲುಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನೇಮಕಗೊಂಡಿದ್ದ ಪೇದೆ ಸತೀಶ್‌ಚಂದ್ರ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಎಚ್ಚೆತ್ತು ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಆನಂತರ ರೈಲು ಮದ್ದೂರು ನಿಲ್ದಾಣಕ್ಕೆ ಬಂದ ನಂತರ ಆರೋಪಿಗಳನ್ನು ಪೇದೆ ಸತೀಶ್‌ಚಂದ್ರ ವಶಕ್ಕೆ ಪಡೆಯಲು ಹೋದಾಗ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದರು. ಈ ಪೈಕಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡ ನಂತರ ಉಳಿದ ಆರೋಪಿಗಳ ಪತ್ತೆಗೆ ಬೆಂಗಳೂರಿನ ರೈಲ್ವೆ ಪೊಲೀಸ್ ಅಧೀಕ್ಷಕಿ ಡಾ. ಸೌಮ್ಯಲತಾ, ಮೈಸೂರು ವಿಭಾಗದ ಡಿವೈಎಸ್ಪಿ ರವಿಕುಮಾರ್, ಸಿಪಿಐ ಮಂಜುನಾಥ್, ಬೆಂಗಳೂರು ಮತ್ತು ಮೈಸೂರು ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.