48 ಗಂಟೆಗಳಲ್ಲಿ ಕೊಲೆ ಆರೋಪಿಗಳ ಬಂಧನ

| Published : Mar 31 2024, 02:11 AM IST

ಸಾರಾಂಶ

ಖಾನಾಪುರ ತಾಲೂಕಿನ ಗುಂಜಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಹನ ಚಾಲಕನ ಕೊಲೆ ಪ್ರಕರಣದ ಜಾಡು ಹತ್ತಿದ ಖಾನಾಪುರ ಠಾಣೆಯ ಪೊಲೀಸರು ದೂರು ದಾಖಲಾದ 48 ಗಂಟೆಯೊಳಗೆ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಗುಂಜಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಹನ ಚಾಲಕನ ಕೊಲೆ ಪ್ರಕರಣದ ಜಾಡು ಹತ್ತಿದ ಖಾನಾಪುರ ಠಾಣೆಯ ಪೊಲೀಸರು ದೂರು ದಾಖಲಾದ 48 ಗಂಟೆಯೊಳಗೆ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ಗುಂಡಲಗೇರ ನಿವಾಸಿ ಯಲ್ಲಪ್ಪ ಮತ್ತು ಅದೇ ಜಿಲ್ಲೆಯ ತೇವರ ವಡಗೇರ ನಿವಾಸಿ ವಿಜಯಕುಮಾರ ಬಂಧಿತ ಆರೋಪಿಗಳು.

ಆಗಿದ್ದೇನು?: ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಯಶಸ್ವಿ ರೋಡ್ ವರ್ಕ್ ಸಂಸ್ಥೆಯಲ್ಲಿ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದ ಜಟ್ಟೆಪ್ಪ (ರವಿ) ಶರಣಪ್ಪ ಹಿರೇಕುರುಬರ (35) ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾ.26 ರಂದು ರಾತ್ರಿ ಗುಂಜಿ ಗ್ರಾಮದ ಬಳಿ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಮತ್ತು ವಿಜಯಕುಮಾರ ಕ್ಷುಲ್ಲಕ ಕಾರಣಕ್ಕೆ ರವಿ ಜೊತೆ ಜಗಳ ತೆಗೆದಿದ್ದರು.ಇವರ ನಡುವೆ ಮಾತಿಗೆ ಮಾತು ಬೆಳೆದು ರವಿಯ ಮೇಲೆ ಯಲ್ಲಪ್ಪ ಮತ್ತು ವಿಜಯಕುಮಾರ ಇವರಿಬ್ಬರೂ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮಾ.28ರಂದು ಮೃತಪಟ್ಟಿದ್ದರು. ರವಿ ಸಾವಿಗೆ ಯಲ್ಲಪ್ಪ ಮತ್ತು ವಿಜಯಕುಮಾರ ಕಾರಣ ಎಂದು ರವಿಯ ತಾಯಿ ಖಾನಾಪುರ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ತನಿಖೆ ಆರಂಭಿಸಿದ ಖಾನಾಪುರ ಠಾಣೆಯ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ ಪ್ರಕರಣ ದಾಖಲಾದ 48 ಗಂಟೆಯಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ನಡೆದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಖಾನಾಪುರ ಠಾಣೆಯ ನಿರಂಜನಸ್ವಾಮಿ, ಜಗದೀಶ ಕಾದ್ರೊಳ್ಳಿ, ಗುರುರಾಜ ತಮದಡ್ಡಿ, ಈಶ್ವರ ಜಿನ್ನವ್ವಗೋಳ, ಮಂಜುನಾಥ ಮುಸಳಿ ಮತ್ತು ಜಿಲ್ಲಾ ಟೆಕ್ನಿಕಲ್ ಸೆಲ್ ಸಿಬ್ಬಂದಿ ವಿನೋದ ಠಕ್ಕನವರ, ಸಚಿನ ಪಾಟೀಲ ಭಾಗವಹಿಸಿದ್ದರು.