ಸಚಿವರ ಆಪ್ತಸಹಾಯಕ ಸೋಗು ಹಾಕಿ ವಂಚಿಸಿದ ಆರೋಪಿಗಳ ಸೆರೆ

| Published : Nov 23 2023, 01:45 AM IST

ಸಾರಾಂಶ

ಪ್ರಕರಣದ ಜಾಡು ಹಿಡಿದ ಪೊಲೀಸರ ತಂಡ ನ.22 ರಂದು ಆರೋಪಿಗಳಾದ ಮೈಸೂರು ನಿವಾಸಿ ರಘುನಾಥ (34) ಮತ್ತು ಶಿವಮೂರ್ತಿ (35) ಎಂಬವರನ್ನು ಬಂಧಿಸಿದೆ. ಸಚಿವರ ಆಪ್ತಸಹಾಯಕರು ಅಥವಾ ಕಚೇರಿ ಹೆಸರಿನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ನೀಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಎನ್.ಎಸ್. ಬೋಸರಾಜ್ ಅವರು ಕೊಡಗು ಜಿಲ್ಲಾ ಎಸ್ಪಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಆಪ್ತ ಸಹಾಯಕರು ಎಂದು ಹೇಳಿ ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ಪಡೆದುಕೊಂಡು ವಂಚಿಸಿದ್ದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಕುಶಾಲನಗರ ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಎನ್ ಸಂತೋಷ್ ಎಂಬುವವರ ಮೊಬೈಲ್ ಗೆ ನ.19 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದಾನೆ. ತುರ್ತಾಗಿ ರೂ. 20 ಸಾವಿರ ಹಣದ ಅವಶ್ಯಕತೆಯಿದ್ದು, ಗೂಗಲ್ ಪೇ ಮೂಲಕ ಕಳುಹಿಸುವಂತೆ ಕೇಳಿಕೊಂಡನಲ್ಲದೇ ಹಣ ಆದಷ್ಟು ಬೇಗ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಆತನ ಮಾತನ್ನು ನಂಬಿದ ಕಂದಾಯ ನಿರೀಕ್ಷಕ ಸಂತೋಷ್ ರು.20 ಸಾವಿರವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದಾರೆ. ಇದಾದ ಮರುದಿನ ಹಣದ ವಿಚಾರವಾಗಿ ಸಂತೋಷ್ ಸಚಿವರ ಕಚೇರಿಯಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಹಣ ಕೇಳಿ ಪಡೆದುಕೊಂಡ ವ್ಯಕ್ತಿಯ ಬಗ್ಗೆ ಹಾಗೂ ಮೊಬೈಲ್ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಚಿವರ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ತಾನು ಅಪರಿಚಿತರಿಂದ ವಂಚನೆಗೊಳಗಾಗಿರುವುದನ್ನು ಅರಿತ ಅಧಿಕಾರಿ ಸಂತೋಷ್ ಕೂಡಲೇ ಪೊಲೀಸ್ ದೂರು ದಾಖಲಿಸಿದರು. ಈ ಹಿನ್ನೆಲೆ ಸೋಮವಾರಪೇಟೆ ಉಪವಿಭಾಗದ ಡಿಎಸ್‌ಪಿ ಆರ್.ವಿ ಗಂಗಾಧರಪ್ಪ, ವೃತ್ತ ನಿರೀಕ್ಷಕರಾದ ಬಿ.ಜಿ. ಪ್ರಕಾಶ್ ಹಾಗೂ ಕುಶಾಲನಗರದ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಗೀತಾ, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಕಾಶಿನಾಥ ಬಗಲಿ ಮತ್ತು ಸಿಬ್ಬಂದಿಗಳ ತಂಡ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ತನಿಖೆ ಕೈಗೊಂಡಿತು. ಪ್ರಕರಣದ ಜಾಡು ಹಿಡಿದ ಪೊಲೀಸರ ತಂಡ ನ.22 ರಂದು ಆರೋಪಿಗಳಾದ ಮೈಸೂರು ನಿವಾಸಿ ರಘುನಾಥ (34) ಮತ್ತು ಶಿವಮೂರ್ತಿ (35) ಎಂಬವರನ್ನು ಬಂಧಿಸಿದೆ.

ಸೂಕ್ತ ಕ್ರಮಕ್ಕೆ ಸಚಿವ ಸೂಚನೆ: ಸಚಿವರ ಆಪ್ತಸಹಾಯಕರು ಅಥವಾ ಕಚೇರಿ ಹೆಸರಿನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ನೀಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಎನ್.ಎಸ್. ಬೋಸರಾಜ್ ಅವರು ಕೊಡಗು ಜಿಲ್ಲಾ ಎಸ್ಪಿಗೆ ಸೂಚಿಸಿದ್ದಾರೆ.

ಸಚಿವರ ಆಪ್ತಸಹಾಯಕರು ಅಥವಾ ಕಛೇರಿ ಹೆಸರಿನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ನೀಡುವ ವ್ಯಕ್ತಿಗಳ ಕುರಿತು ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್ ಕೋರಿದ್ದಾರೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.