ಬಾಡಿಗೆ ಕಾರಿನ ದಾಖಲೆ ಬದಲಿಸಿ ಮಾರುತ್ತಿದ್ದವನ ಸೆರೆ

| Published : Jun 22 2024, 01:32 AM IST / Updated: Jun 22 2024, 07:17 AM IST

jail

ಸಾರಾಂಶ

ಕಾರುಗಳನ್ನು ಬಾಡಿಗೆಗೆ ಪಡೆದು ಬಳಿಕ ಜಿಪಿಎಸ್‌ ಕಿತ್ತೆಸೆದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಅಥವಾ ಗಿರವಿ ಇಡುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಕಾರುಗಳನ್ನು ಬಾಡಿಗೆಗೆ ಪಡೆದು ಬಳಿಕ ಜಿಪಿಎಸ್‌ ಕಿತ್ತೆಸೆದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಅಥವಾ ಗಿರವಿ ಇಡುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆ ನಿವಾಸಿ ಶ್ರೀನಿವಾಸ( 35) ಬಂಧಿತ. ಆರೋಪಿಯಿಂದ 90 ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಾಳೇನ ಅಗ್ರಹಾರದ ಎಂಎಲ್‌ಎ ಲೇಔಟ್‌ ನಿವಾಸಿ ಮಹೇಶ್‌ ಜಾ ಎಂಬುವವರ ಕಾರನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದು ಬಳಿಕ ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿ ಗಾಳ:

ಆರೋಪಿ ಶ್ರೀನಿವಾಸ್‌, ಫೇಸ್‌ಬುಕ್‌, ಒಎಲ್‌ಎಕ್ಸ್‌ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಕಾರು ಬಾಡಿಗೆಗೆ ಇರುವ ಅಥವಾ ಮಾರಾಟಕ್ಕೆ ಇರುವ ಜಾಹೀರಾತು ಹಾಕುವ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದ. ಕಾರಿನ ಸಾಲದ ಕಂತು ಪಾವತಿಸಲು ಪರದಾಡುವ ವ್ಯಕ್ತಿಗಳನ್ನು ಗುರುತಿಸಿ, ನಾನೇ ಬಾಡಿಗೆಗೆ ಕಾರನ್ನು ಓಡಿಸಿಕೊಂಡು ಕಾರಿನ ಸಾಲದ ಕಂತನ್ನು ಪಾವತಿ ಮಾಡುತ್ತೇನೆ. ನಿಮಗೂ ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ.

ಅಡಮಾನ ಇರಿಸಿ ಹಣ ಪಡೆಯುತ್ತಿದ್ದ!:

ಬಳಿಕ ಆ ಕಾರುಗಳ ಮಾಲೀಕರಿಂದ ಅಸಲಿ ಆರ್‌ಸಿ, ವಿಮಾ ಪಾಲಿಸಿ ಸೇರಿದಂತೆ ಇತರೆ ದಾಖಲೆಗಳನ್ನು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಬಳಿಕ ಆ ದಾಖಲೆಗಳನ್ನು ಎಡಿಟ್‌ ಮಾಡಿ ತನ್ನ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ ಕಾರಿನ ಜಿಪಿಎಸ್‌ ಕಿತ್ತೆಸೆದು ಪರಿಚಿತ ವ್ಯಕ್ತಿಗಳ ಮುಖಾಂತರ ಕಾರನ್ನು ಅಡಮಾನವಿರಿಸಿ 50 ಸಾವಿರ ರು.ನಿಂದ 1 ಲಕ್ಷ ರು. ಸಾಲ ಪಡೆಯುತ್ತಿದ್ದ. ಬಳಿಕ ಕಾರಿನ ಸಾಲದ ಕಂತನ್ನು ಪಾವತಿಸುತ್ತಿರಲಿಲ್ಲ.

ಮೊಬೈಲ್‌ ಸಂಖ್ಯೆ ಬದಲು:

ಇನ್ನು ಬ್ಯಾಂಕಿನಿಂದ ಕಾರಿನ ಸಾಲದ ಕಂತು ಪಾವತಿಸುವಂತೆ ಕಾರಿನ ಮಾಲೀಕರಿಗೆ ನೋಟಿಸ್‌ ಬರುತ್ತಿತ್ತು. ಆಗ ಮಾಲೀಕರು ಶ್ರೀನಿವಾಸ್‌ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಶ್ರೀನಿವಾಸ ತನ್ನ ಮೊಬೈಲ್‌ ಸಂಖ್ಯೆ ಬದಲಿಸಿಕೊಂಡು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. 

90 ಲಕ್ಷ ರು. ಮೌಲ್ಯದ ಒಂಬತ್ತು ಕಾರು ಜಪ್ತಿ:

ಆರೋಪಿ ಶ್ರೀನಿವಾಸನಿಂದ ಜಪ್ತಿ ಮಾಡಲಾದ 9 ಕಾರುಗಳ ಪೈಕಿ ಮೂರು ಕಾರುಗಳನ್ನು ಅಡಮಾನ ಇರಿಸಿದ್ದ. ಮೂರು ಕಾರುಗಳನ್ನು ಮಾರಾಟ ಮಾಡಿದ್ದ. ಉಳಿದ ಮೂರು ಕಾರುಗಳ ಮಾರಾಟಕ್ಕೆ ಗಿರಾಕಿಗಳನ್ನು ಹುಡುಕುತ್ತಿದ್ದ. ಆರೋಪಿಯು ನಗರದ ಹಲವೆಡೆ ಈ ರೀತಿ ಕಾರು ಪಡೆದು ವಂಚನೆ ಮಾಡಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರಗೆ ಬೀಳಲಿದೆ.

ಏನಿದು ಪ್ರಕರಣ?

ದೂರುದಾರ ಕಾಳೇನ ಅಗ್ರಹಾರ ಎಂಎಲ್‌ ಲೇಔಟ್‌ ನಿವಾಸಿ ಮಹೇಶ್‌ ಜಾ ಎಂಬುವವರು ತಮ್ಮ ಪತ್ನಿ ಹೆಸರಿನಲ್ಲಿ ನಾಲ್ಕು ವರ್ಷದ ಹಿಂದೆ ಮಾರುತಿ ಸ್ವಿಫ್ಟ್‌ ಕಾರು ಖರೀದಿಸಿದ್ದರು. ಗ್ರಾಹಕರು ಆನ್‌ಲೈನಲ್ಲಿ ಬಾಡಿಗೆಗೆ ಕಾರು ಬುಕ್‌ ಮಾಡುವ ಜೂಮ್‌ ಕಾರು ಕಂಪನಿಯಲ್ಲಿ ತಮ್ಮ ಕಾರನ್ನು ನೋಂದಣಿ ಮಾಡಿಕೊಂಡಿದ್ದರು. ಜೂಮ್‌ ಕಾರಿನವರು ಆನ್‌ಲೈನ್‌ ಬುಕಿಂಗ್‌ ಪಡೆದು ಬಳಿಕ ತಮ್ಮ ಕಮಿಷನ್‌ ಮುರಿದುಕೊಂಡು ಮಹೇಶ್‌ಗೆ ಬಾಡಿಗೆ ಹಣ ನೀಡುತ್ತಿದ್ದರು.

ಅದರಂತೆ ಮಾ.23ರಂದು ಶ್ರೀನಿವಾಸ್‌ ಎಂಬಾತ ಮಹೇಶ್‌ ಜಾ ಅವರನ್ನು ಸಂಪರ್ಕಿಸಿ, ನಾನು ಜೂಮ್‌ ಕಾರ್‌ನಲ್ಲಿ ನಿಮ್ಮ ಸ್ವಿಫ್ಟ್‌ ಕಾರನ್ನು ಬುಕ್‌ ಮಾಡಿದ್ದೇನೆ. ಜೂಮ್‌ ಕಾರಿನವರಿಗೆ ಕಮಿಷನ್‌ ನೀಡುವ ಬದಲು ಈ ಬುಕಿಂಗ್‌ ರದ್ದುಗೊಳಿಸಿ, ನಾನೇ ನಿಮಗೆ ನೇರವಾಗಿ ಬಾಡಿಗೆಯ ಪೂರ್ತಿ ಹಣ ನೀಡುತ್ತೇನೆ. ನನಗೆ ಒಂದು ತಿಂಗಳ ಮಟ್ಟಿಗೆ ನಿಮ್ಮ ಕಾರನನ್ನು ಬಾಡಿಗೆಗೆ ಕೊಡಿ ಎಂದು ಕೇಳಿದ್ದಾನೆ. ಈತನ ಮಾತು ನಂಬಿದ ಶ್ರೀನಿವಾಸ್‌ ತಮ್ಮ ಕಾರನ್ನು ಒಂದು ತಿಂಗಳ ಮಟ್ಟಿಗೆ (ಜೂ.24) ಬಾಡಿಗೆಗೆ ಶ್ರೀನಿವಾಸ್‌ಗೆ ನೀಡಿದ್ದಾರೆ. ಈ ಒಂದು ತಿಂಗಳ ಅವಧಿ ಮುಗಿದರೂ ಶ್ರೀನಿವಾಸ್‌ ಕಾರನ್ನು ವಾಪಾಸ್‌ ನೀಡಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ಡ್‌ ಆಫ್‌ ಬಂದಿದೆ. ಬಳಿಕ ಈ ಸಂಬಂಧ ಕಾರು ಮಾಲೀಕ ಮಹೇಶ್‌ ಜಾ ದೂರು ನೀಡಿದ್ದರು.