ಸಾರಾಂಶ
ಧಾರವಾಡ : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನೇಹಾ ಹಾಗೂ ಫಯಾಜ್ ಪ್ರೀತಿಗೆ ನ್ಯಾಯ ಸಿಕ್ಕಿತೆಂಬ ಅರ್ಥದಲ್ಲಿ ಜಸ್ಟಿಸ್ ಫಾರ್ ಲವ್, ನೇಹಾ-ಫಯಾಜ್ ಟ್ರು ಲವ್ ಎಂದು ಇನ್‌ಸ್ಟಾಗ್ರಾಂನಲ್ಲಿ ನಗರದ ಸಾದಿಕ್ ತಡಕೋಡ ಹಾಗೂ ಆದಿಲ್ ಎಂಬುವವರು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಇಬ್ಬರು ಆರೋಪಿಗಳನ್ನು ತಾವೇ ಹಿಡಿದುಕೊಂಡು ಶನಿವಾರ ತಡ ರಾತ್ರಿ ವಿದ್ಯಾಗಿರಿ ಪೊಲೀಸರ ವಶಕ್ಕೆ ನೀಡಿದರು. ಅಲ್ಲದೇ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಲ ಹೊತ್ತು ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು. ಯುವಕರು ಮಾಡಿದ ಈ ಮುಸ್ಲಿಂ ಮುಖಂಡರಿಂದಲೂ ವಿರೋಧ ವ್ಯಕ್ತವಾಗಿದೆ.
ನೇಹಾ ಹತ್ಯೆ ಆರೋಪಿಯ ಊರಲ್ಲಿ ದಲಿತ ಮಹಿಳೆಯ ಮತಾಂತರಕ್ಕೆ ಯತ್ನ
ಬೆಳಗಾವಿ : ಹುಬ್ಬಳ್ಳಿ ಯುವತಿ ನೇಹಾ ಹತ್ಯೆ ಕೇಸ್‌ನ ಕಾವು ಆರುವ ಮುನ್ನವೇ ಹತ್ಯೆಯ ಆರೋಪಿ ಫಯಾಜ್‌ನ ಊರಲ್ಲೇ ವಿವಾಹಿತ ದಲಿತ ಮಹಿಳೆಯನ್ನು ಇಸ್ಲಾಂಗೆ ಮತಾಂತರ ಮಾಡುವ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ರಫೀಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ನಡೆಸುತ್ತಿರುವ ಅಂಗಡಿಗೆ ಆಗಾಗ ಬರುತ್ತಿದ್ದ ರಫೀಕ್, ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ವಿಷಯ ಗೊತ್ತಾಗಿ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು. ಆಕೆ ಗಂಡನನ್ನು ಬಿಟ್ಟು ತವರು ಮನೆಗೆ ಹೊರಡಲು ಮುಂದಾದಾಗ ಆಕೆಯನ್ನು ಪುಸಲಾಯಿಸಿ, ಬಾಡಿಗೆ ಮನೆಯಲ್ಲಿ ಇರಿಸಿದ್ದ. ಆಕೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿಸಿದ್ದ. ಬಳಿಕ ನೀನು ಕೀಳು ಜಾತಿಯವಳು, ಇಸ್ಲಾಂಗೆ ಮತಾಂತರಗೊಳ್ಳು ಎಂದು ಪೀಡಿಸಿದ್ದ. ಮತಾಂತರವಾಗದಿದ್ದರೆ, ನಿನ್ನ, ನಿನ್ನ ಕುಟುಂಬವನ್ನು ಸಾಯಿಸುವುದಾಗಿ ಬೆದರಿಸಿದ್ದ ಎಂದು ಮಹಿಳೆ ದೂರಿದ್ದಾಳೆ.
ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ
ಬೆಂಗಳೂರು
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಸೇರಿದಂತೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಹಲವು ಹಿಂಸಾ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿನ ಕಾನೂನು- ಸುವ್ಯವಸ್ಥೆ ವೈಫಲ್ಯ ಖಂಡಿಸಿ ಬಿಜೆಪಿಯು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ.
ಚುನಾವಣಾ ಕಾರ್ಯವನ್ನು ಬದಿಗಿರಿಸಿ ಸೋಮವಾರ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ.
ಆದರೂ ಲೋಕಸಭಾ ಚುನಾವಣೆಯ ಪೂರ್ವ ನಿರ್ಧಾರಿತ ಚುನಾವಣಾ ಸಭೆಗಳ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ಮುಂದೂಡಲಾಗಿದೆ.ಚುನಾವಣೆಯ ಗಡಿಬಿಡಿಯಲ್ಲಿ ನಾವು ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯ, ದೈವ ನಿಂದನೆ ಹಾಗೂ ರಾಷ್ಟ್ರ ಭಕ್ತರ ಮೇಲಿನ ಹಲ್ಲೆ ಪ್ರಕರಣಗಳನ್ನು ನಿರ್ಲಕ್ಷಿಸಿ ಕೂರಲಾಗದು. ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಅಮಾನುಷ ಘಟನೆ.
ಇದನ್ನು ಪೋಲಿಸರು ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಬೇಕಾಗಿದೆ. ಆದರೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕೆಲ ಸಚಿವರು ಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ನೋಡಿದರೆ ದುಷ್ಟರಿಗೆ ಹಾಗೂ ಹಿಂದೂ ಧರ್ಮದ ಕಂಟಕರಿಗೆ ಸರ್ಕಾರದ ಕೃಪಾಪೋಷಣೆಯ ಉದಾರತೆ ದೊರೆಯುತ್ತಿರುವುದು ಸ್ಪಷ್ಟವಾಗಿದೆ, ಅಲ್ಪಸಂಖ್ಯಾತರ ಓಲೈಕೆಯೇ ಈ ಸರ್ಕಾರದ ಆದ್ಯತೆಯಾಗಿದೆ ಎಂದು ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೃತ ನೇಹಾ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ:ನೇಹಾಳ ಸಾವನ್ನು ಯಾರೂ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ನ್ಯಾಯಸಮ್ಮತವಾದ ತನಿಖೆ ನಡೆದು ಹಂತಕನಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದರು.
ನೇಹಾಳ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇವಲ ಸ್ವಾರ್ಥಕ್ಕಾಗಿ ಯಾರೂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬಾರದು. ಪ್ರಕರಣದಲ್ಲಿ ಯಾವುದೇ ಜಾತಿ, ಧರ್ಮ, ರಾಜಕಾರಣ ತರಬೇಡಿ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಪದೇ ಪದೆ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಕೊಲೆ ಆರೋಪಿ ಒಬ್ಬನೇ ಇರುವುದಿಲ್ಲ. ಅವನಿಗೆ ಬೇರೆಯವರು ಬೆಂಬಲ ಕೊಟ್ಟಿರುವ ಸಾಧ್ಯತೆಯಿದೆ. ಹೀಗಾಗಿ ಸಮಗ್ರ ತನಿಖೆ ನಡೆಯಬೇಕು. ನೇಹಾಳ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಅವರೊಂದಿಗೆ ಇದ್ದೇವೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ ನೀಡಿರುವ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾರೇ ಆಗಲಿ ಘಟನೆಯ ಸೂಕ್ಷ್ಮತೆ ಗ್ರಹಿಸಿ, ಕುಟುಂಬದವರಿಗೆ ನೋವುಂಟು ಮಾಡುವ ಹೇಳಿಕೆ ನೀಡಬಾರದು ಎಂದರು.
ಶಾಲಾ, ಕಾಲೇಜುಗಳಲ್ಲಿ ಸರ್ಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳು ಮಹಿಳೆಯರ ಮೇಲೆ ದೌರ್ಜನ್ಯ ನಡೆಯದಂತೆ ಯಾವ ರೀತಿಯ ಭದ್ರತೆ ನೀಡಿವೆ ಎಂಬುದನ್ನು ಸರ್ಕಾರ ಪ್ರತಿ ಜಿಲ್ಲಾಧಿಕಾರಿ ಮೂಲಕ 15 ದಿನಗಳಲ್ಲಿ ಮಾಹಿತಿ ತರಿಸಿಕೊಳ್ಳಬೇಕು. ಈ ಕುರಿತು ಈಗಾಗಲೇ ನಾನು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಮಗ್ರ ಮಾಹಿತಿ ಪಡೆಯುವೆ ಎಂದರು.
ನೇಹಾ ಕೊಲೆ ಕೇಸ್ ಸಿಬಿಐಗೆ ವಹಿಸಿ: ನಡ್ಡಾ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಇಲ್ಲಿನ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಮೂರು ದಿನಗಳ ಹಿಂದೆ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದೆ, ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.ಕುಟುಂಬಸ್ಥರೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದ ನಡ್ಡಾ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನೇಹಾ ಕೊಲೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಅಸಮರ್ಥವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.
ಇದು ಅತ್ಯಂತ ಭೀಕರ ಘಟನೆಯಾಗಿದ್ದು, ಇಡೀ ದೇಶವೇ ಬೆಚ್ಚಿಬಿದ್ದಿದೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿ, ಅವರೊಂದಿಗೆ ನಾವಿದ್ದೇವೆ ಎಂದು ಹೇಳಲು ನಾನು ಆಗಮಿಸಿದ್ದೇನೆ. ಘಟನೆ ಕುರಿತು ಮೃತಳ ತಾಯಿ ಹೇಳಿರುವುದನ್ನು ಕೇಳಿ ನನಗೆ ತೀವ್ರ ನೋವು ಆಗಿದೆ. ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ನಾವೆಲ್ಲ ಬದ್ಧರಾಗಿದ್ದೇವೆ ಎಂದರು.ಜನತೆ ಕ್ಷಮಿಸುವುದಿಲ್ಲ:
ಕೊಲೆ ಕುರಿತು ಮುಖ್ಯಮಂತ್ರಿ, ಗೃಹಸಚಿವರು ನೀಡಿರುವ ಕೇಳಿಕೆ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವ ಮೊದಲು ಅರಿತು ಮಾತನಾಡಬೇಕು. ಕೇವಲ ತುಷ್ಟೀಕರಣಕ್ಕಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ತನಿಖೆಯ ಸಂಪೂರ್ಣ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಈ ತುಷ್ಟೀಕರಣವನ್ನು ಜನರು ಕ್ಷಮಿಸುವುದಿಲ್ಲ ಎಂದರು.ನೀವೇ ನ್ಯಾಯ ಕೊಡಿಸಿ-ನಿರಂಜನ್:
ನಡ್ಡಾ ಭೇಟಿ ವೇಳೆ ನೇಹಾಳ ತಂದೆ ನಿರಂಜನ್, ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಈಗಾಗಲೇ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಈ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಹೇಗಾದರೂ ಮಾಡಿ ನಮಗೆ ನ್ಯಾಯ ಕೊಡಿಸಿ, ಇದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ನಡ್ಡಾ, ನಿಮ್ಮ ನೋವು ನನಗೆ ಅರ್ಥವಾಗಿದೆ. ಸರ್ಕಾರ ನೇಹಾಳ ಹೆಸರಿನಲ್ಲಿ ವಿಶೇಷ ಕಾನೂನು ರಚಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರನ್ನು ಶೂಟೌಟ್ ಮಾಡುವ ಕಾನೂನು ಜಾರಿಗೆ ತರಲು ಒತ್ತಾಯಿಸುವುದಾಗಿ ಭರವಸೆ ನೀಡಿದರು. ನಂತರ ನೇಹಾಳ ತಾಯಿ ಗೀತಾ ಅವರೊಂದಿಗೆ ಚರ್ಚೆ ನಡೆಸಿ ಪುತ್ರಿಯ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನಡ್ಡಾ ನೀಡಿದರು.