ಸಾರಾಂಶ
ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಬೆಂಕಿ ಹಚ್ಚಿದ್ದ ಇಬ್ಬರು ಕಿಡಿಗೇಡಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿದ್ದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಮತ್ತಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾವೇರಿ ವನ್ಯಧಾಮದ ಸಂಗಮ ವನ್ಯಜೀವಿ ವಲಯದ ಜಲಧಾರೆ ಗುಡ್ಡ ಅರಣ್ಯ ಪ್ರದೇಶದಲ್ಲಿ ಫೆ.23 ರಂದು ಬೆಂಕಿ ಹಾಕಿದ್ದ ರಾಜಪ್ಪ ಹಾಗೂ ಶಿವರಾತ್ರಿ ಹಬ್ಬದ ದಿನ ಫೆ.26 ರಂದು ಕಂಚಿನಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿದ್ದ ದೇವರಾಜು ಎಂಬ ವ್ಯಕ್ತಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾಡಿನಲ್ಲಿರುವ ಒಣ ಹುಲ್ಲಿಗೆ ಬೆಂಕಿ ಹಚ್ಚಿದರೆ ಅದು ಉರಿದು ಮಳೆಗಾಲದಲ್ಲಿ ಹೊಸ ಹುಲ್ಲು ಚಿಗುರುತ್ತದೆ. ಜಾನುವಾರುಗಳು, ಮೇಕೆ, ಕುರಿಗಳು ಮೇಯಲು ಅನುಕೂಲವಾಗುತ್ತದೆ ಎಂಬ ಕಾರಣದಿಂದಾಗಿ ಕಾಡಿಗೆ ಬೆಂಕಿ ಹಾಕಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.ಇಬ್ಬರ ವಿರುದ್ಧ ಪ್ರಕರಣ ದಾಖಲು:
ಹನೂರು ವನ್ಯಜೀವಿ ವಲಯದ ಶಾಗ್ಯ ಶಾಖೆಯ ಸಿಪಿಟಿ 26 ರ ಕಾರಯ್ಯನಬೆಟ್ಟ ಎಂಬ ಅರಣ್ಯ ಪ್ರದೇಶದಲ್ಲಿ ಇಬ್ಬರು ಆರೋಪಿಗಳು ಬೆಂಕಿ ಹೆಚ್ಚಿದ್ದು ಫೆ.25 ರಂದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.ಡ್ರೋಣ್ ಕಣ್ಗಾವಲು:ಅರಣ್ಯದಲ್ಲಿ ಬೆಂಕಿ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಕಾಡಿನೊಳಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋಣ್ ಹರಿಬಿಡುವ ಮೂಲಕ ಅರಣ್ಯದೊಳಗೆ ಅಕ್ರಮವಾಗಿ ನುಸುಳುವವರ ಬಗ್ಗೆ ಹಾಗೂ ಬೆಂಕಿ ಹಚ್ಚುವವರ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.