ಧಾರವಾಡ:
ಒಂಟಿ ಮನೆಯಲ್ಲಿ ವೃದ್ಧೆ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರ ಮೂಲದ ಬಬನ್ ಸದಾಶಿವ ಜಾವೀರ್ (40) ಬಂಧಿತ ಆರೋಪಿಯಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮೇ 9ರಂದು ದಡ್ಡಿ ಕಮಲಾಪುರದ ಅರಣ್ಯ ಪ್ರದೇಶದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ವಿಶಾಲಾಕ್ಷಿ ಅಂಗಡಿ (68) ಎಂಬುವರು ಕೊಲೆಯಾಗಿದ್ದರು. ಈ ನಿಗೂಢ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.ಆಗಿದ್ದೇನು?
ವಿಶಾಲಾಕ್ಷಿ ಅಂಗಡಿ ಮಕ್ಕಳಿದ್ದರೂ ಮನಸ್ತಾಪದಿಂದಾಗಿ ದಡ್ಡಿ ಕಮಲಾಪುರ ಬಳಿಯ ತೋಟದ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಸದಾಶಿವ ಜಾವೀರ್ ನಾನು ನಿನ್ನ ಮಗನಂತೆ ಇರುತ್ತೇನೆ. ಇಳಿ ವಯಸ್ಸಿನಲ್ಲಿ ನಿನಗೆ ಆಸರೆಯಾಗುತ್ತೇನೆಂದು ಪರಿಚಯ ಮಾಡಿಕೊಂಡಿದ್ದ. ಬಳಿಕ ಚಿನ್ನದ ಆಸೆಗಾಗಿ ಅಜ್ಜಿಯನ್ನೇ ಕೊಂದು ಹಾಕಿದ್ದಾನೆ. ಬಹಳ ದಿನಗಳಾದರೂ ತಾಯಿ ಕಡೆಯಿಂದ ಫೋನ್ ಬಾರದೇ ಇದ್ದಾಗ, ಸಂಶಯ ಬಂದು ಮೇ 9ರಂದು ವಿಶಾಲಾಕ್ಷಿ ಪುತ್ರ ರತ್ನಾಕರ್ ಮನೆ ಬಳಿ ಬಂದಾಗ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಅವರು ಮನೆ ಬಾಗಿಲು ತೆಗೆದು ನೋಡಿದಾಗ ವೃದ್ಧೆ ಮೃತಪಟ್ಟಿರುವುದು ತಿಳಿದಿದೆ. ಬಳಿಕ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಕೊಲೆ ಎಂಬುವುದು ತಿಳಿದುಬಂದಿದೆ.ವಿಶ್ವಾಸ ಗಳಿಸಿದ ಆಗಂತುಕ:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಎಸ್ಪಿ ಗುಂಜನ್ ಆರ್ಯ, ಹಲವು ವರ್ಷಗಳಿಂದ ಧಾರವಾಡದ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಬಬನ್, ವಿಶಾಲಾಕ್ಷಿ ಒಂಟಿಯಾಗಿರುವುದನ್ನು ಅರಿತು, ಆಕೆಯ ವಿಶ್ವಾಸ ಗಳಿಸಿದ್ದಾನೆ. ನಿನ್ನ ಮಕ್ಕಳು ದೂರವಿದ್ದರೇನು? ನಾನು ನಿನ್ನ ಮಗನಂತೆಯೇ ಇದ್ದೇನೆ ಎಂದು ಅಜ್ಜಿಯನ್ನು ನಂಬಿಸಿದ್ದಾನೆ. ಜತೆಗೆ ಆಗಾಗ ದೂರವಾಣಿಯಲ್ಲಿ ಮಾತನಾಡಿ ನಂಬಿಸಿದ್ದಾನೆ. ಮೇ 3ರಂದು ಬಬನ್ ವೃದ್ಧೆ ಮನೆಗೆ ಬಂದಾಗ ಕೆಲ ಕಾಲ ಅವರೊಂದಿಗೆ ಮಾತನಾಡಿ ಬಳಿಕ ತಲೆಗೆ ರಾಡ್‌ನಿಂದ ಹೊಡೆದು, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ. ಬಳಿಗ ವೃದ್ಧೆಯ ಬಳಿ ಇದ್ದ ₹ 5 ಲಕ್ಷ ಮೌಲ್ಯದ ಚಿನ್ನದ ಸರ, ₹ 5000 ನಗದು ತೆಗೆದುಕೊಂಡು ಹೋಗಿದ್ದಾನೆ.
ಈ ಕುರಿತು ಯಾವುದೇ ಸುಳಿವು ಇಲ್ಲದಿದ್ದರೂ ಪೊಲೀಸರು ವೃದ್ಧೆಯ ಬಳಿ ಇದ್ದ ಸಣ್ಣ ಪುಸ್ತಕದಲ್ಲಿ ಈತನ ಮೊಬೈಲ್ ನಂಬರ್ ನೋಡಿ ಅದರ ಆಧಾರದ ಮೇಲೆಯೇ ಬಬನ್‌ನನ್ನು ಬಂಧಿಸಲಾಗಿದೆ. ಈ ಮುಂಚೆ ಹರಿಹರದಲ್ಲಿಯೂ ಓರ್ವ ಇಟ್ಟಂಗಿ ಭಟ್ಟಿ ಮಾಲೀಕನ್ನು ಕೊಲೆ ಮಾಡಿರುವ ಆರೋಪ ಈತನ ಮೇಲಿದ್ದು, ಜಾಮೀನಿನ ಮೇಲೆ ಹೊರಗಿದ್ದನು ಎಂದು ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇಟ್ಟಿಗೆ ಮಾಲೀಕರು
ಧಾರವಾಡ ಹಾಗೂ ಸುತ್ತಲಿನ ಹಲವು ಇಟ್ಟಿಗೆ ಬಟ್ಟಿಗಳ ಮಾಲೀಕರಿಗೆ ತಾನು ಹಾಗೂ ತನ್ನ ಕುಟುಂಬದ ಸದಸ್ಯರು ತಮ್ಮಲ್ಲಿ ಕೆಲಸ ಮಾಡುತ್ತೇವೆಂದು ₹ 50000 ರಿಂದ ₹ 6 ಲಕ್ಷ ವರೆಗೂ ಮುಂಗಡ ಹಣ ಪಡೆದಿದ್ದ ಕೊಲೆ ಆರೋಪಿ ಬಬನ್ ಜಾವೀರ್ ಮಾಡಿರುವ ವಂಚನೆ ಪ್ರಕರಣಗಳು ಬಂಧನದ ಬಳಿಕ ಹೊರ ಬರುತ್ತಿವೆ.ಸ್ಥಳೀಯ ಇಟ್ಟಿಗೆ ಬಟ್ಟಿ ಮಾಲೀಕರು ಆತನನನ್ನು ನಂಬಿ ಲಕ್ಷಾಂತರ ರುಪಾಯಿ ಕೊಟ್ಟಿದ್ದರು. ಆತ ಕೆಲಸ ಮಾಡದೇ ಇದ್ದಾಗ, ಮರಳಿ ಹಣ ಕೊಡುವಂತೆ ಕೇಳಿದಾಗ, ಅಷ್ಟೋ ಇಷ್ಟೋ ನೀಡಿದ್ದಾನೆ. ಇನ್ನು, ಲಕ್ಷಾಂತರ ರುಪಾಯಿ ಹಣವನ್ನು ಬಬನ್ ನೀಡಬೇಕಿದ್ದು, ಇಟ್ಟಿಗೆ ಮಾಲೀಕರು ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರೋಪಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆಂದು ಇಟ್ಟಿಗೆ ಬಟ್ಟಿ ಮಾಲೀಕರನ್ನು ಕರೆಯಿಸಿ ಗ್ರಾಮೀಣ ಪೊಲೀಸರು ವಿಚಾರಣೆ ಮಾಡುತ್ತಿರುವುದು ಹಣ ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಬೇಸರ ಮೂಡಿಸಿದೆ.