ಕಲೆ ಕಾಲಾತೀತ, ಅನನ್ಯವಾದದ್ದು: ನಿರ್ಮಲ್‌ ವೈದ್ಯ

| Published : Feb 14 2024, 02:17 AM IST

ಸಾರಾಂಶ

ಭಾರತೀಯ ಸಂಸ್ಕೃತಿ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಜಾನಪದ, ಬುಡಕಟ್ಟು ಕಲಾ ಪರಿಷತ್ತಿನ ಅಧ್ಯಕ್ಷ ನಿರ್ಮಲ್‌ ರತನಲಾಲ್‌ ವೈದ್ಯ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಲೆಗೆ ಜಾತಿ, ಮತ, ಪಂಥಗಳ ಮಿತಿ ಇಲ್ಲ ಹಾಗೆಯೇ ಸಮಯ, ಪ್ರದೇಶದ ಬಂಧನವೂ ಇಲ್ಲ. ಕಲೆ ಕಾಲಾತೀತ, ಸೀಮಾತೀತವಾಗಿದ್ದು, ಪರಮಾನಂದ ನೀಡುತ್ತದೆ ಎಂದು ರಾಷ್ಟ್ರೀಯ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ಅಧ್ಯಕ್ಷ ನಿರ್ಮಲ್‌ ರತನಲಾಲ್‌ ವೈದ್ಯ ಹೇಳಿದರು.

ನಗರದ ಕರ್ನಾಟಕ ಕಾಲೇಜಿನ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಅವರು, ಮನುಷ್ಯ ಹುಟ್ಟಿದಾಗ ಜಾತಿಮತಗಳ ಯಾವುದೇ ಬಂಧನ ಇದ್ದಿರಲಿಲ್ಲ. ನಂತರದ ದಿನಗಳಲ್ಲಿ ವಿವಿಧ ಅಚರಣೆ ಮತ್ತಿತರ ಕಾರಣಗಳಿಂದಾಗಿ ಜಾತಿ, ಮತ ಪಂಥಗಳು ಹುಟ್ಟಿಕೊಂಡವು ಆದರೆ, ಕಲೆ ಮಾತ್ರ ಇವೆಲ್ಲವನ್ನು ಮೀರಿ ಬೆಳೆದಿದೆ ಎಂದರು.

ಭಾರತೀಯ ಸಂಸ್ಕೃತಿಯು ಎಲ್ಲಕ್ಕೂ ಶ್ರೀಮಂತವಾಗಿದೆ, ಈ ಶ್ರೀಮಂತ ಪರಂಪರೆಯಿಂದಾಗಿಯೇ ಭಾರತವನ್ನು ವಿಶ್ವಗುರು ಎನ್ನಲಾಗುತ್ತದೆ. ಯೋಗ ನಮ್ಮ ಸಂಸ್ಕೃತಿಯ ಭಾಗ. ಅದನ್ನೀಗ ಪಾಶ್ಚಾತ್ಯರೂ ಅನುಸರಿಸುತ್ತಿದ್ದಾರೆ. ಇಂತಹವೇ ಹಲವು ಶ್ರೇಷ್ಠ ಆಚರಣೆಗಳು ಭಾರತೀಯ ಸಂಸ್ಕೃತಿಯಲ್ಲಿವೆ ಎಂದು ಹೇಳಿದರು.

ಮನುಷ್ಯ ಹುಟ್ಟಿದಾಗ ಸನಾತನಿಯೇ ಆಗಿದ್ದ. ಸನಾತನ ಎಲ್ಲಕ್ಕೂ ಶ್ರೇಷ್ಠ ಧರ್ಮ. ಎಲ್ಲರ ಒಳಿತನ್ನು, ಕಲ್ಯಾಣವನ್ನು ಬಯಸುವ ಧರ್ಮ. ಆದರೆ, ಕಾಲ ಕಳೆದಂತೆ ಜಾತಿ, ಮತ, ಪಂಥಗಳು ಹುಟ್ಟಿಕೊಂಡವು ಆದರೂ, ಎಲ್ಲರನ್ನೂ ಜೋಡಿಸುವ ಕಲೆ, ಸಂಸ್ಕೃತಿ ನಮ್ಮಲ್ಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ, ಸಂಸ್ಕೃತಿಯನ್ನು ಉಳಿಸುವ ಕಾರ್ಯ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕೆಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿ, ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯವನ್ನು ಕೊಂಡಾಡಿ, ಪರಿಷತ್ತಿನ ಅದ್ಯಕ್ಷ ನಿರ್ಮಲ್‌ ವೈದ್ಯ ಮತ್ತು ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆಯವರ ಶ್ರಮದಿಂದಾಗಿ ಜಾನಪದ ವಿಶ್ವವಿದ್ಯಾಲಯಕ್ಕೆ ಸಾಕಷ್ಟು ಅನುದಾನ ಲಭಿಸಿದೆ ಎಂದರು.

ಜಾನಪದ ವಿಶ್ವವಿದ್ಯಾಲಯದಲ್ಲಿ ವಸ್ತು ಸಂಗ್ರಹಾಲಯ ಆರಂಭಿಸಲಾಗಿದೆ. ಬೀದರ್‌ನಲ್ಲೂ ವಸ್ತು ಸಂಗ್ರಹಾಲಯ ಆರಂಭಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತು ತಿಳಿಸಿದರು. ಕಲೆ ಮತ್ತು ಕಲಾವಿದರನ್ನು ಆರ್ಥಿಕವಾಗಿ ಸಬಲಗೊಳಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬೇರೆ ಬೇರೆ ರಾಜ್ಯಗಳ ಕಲಾವಿದರನ್ನು ಆಹ್ವಾನಿಸುವ ಮೂಲಕ ಸಾಂಸ್ಕೃತಿಕ ವಿನಿಯಮಕ್ಕೆ ಶ್ರಮಿಸಲಾಗುತ್ತಿದೆ ಎಂದರು.

ಡಾ. ಮಹಾನಂದ ಮಡಕಿ ಸ್ವಾಗತಿಸಿ ಡಾ. ಸುನೀತಾ ಕೂಡ್ಲಿಕರ್ ನಿರೂಪಿಸಿದರೆ ಮಲ್ಲಯ್ಯ ಮಠಪತಿ ವಂದಿಸಿದರು.