ಸಾರಾಂಶ
ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ನಡೆದವು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಕಲೆ, ಸಾಹಿತ್ಯದಲ್ಲಿ ಭಾಗವಹಿಸುವುದರ ಮೂಲಕ ಪ್ರತಿಭೆ ಒರೆಗೆ ಹಚ್ಚಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದ್ದಾರೆ.ಇಲ್ಲನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೊಡಗು ಜಿಲ್ಲಾ ಪಂಚಾಯಿತಿ ,ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಮಕ್ಕಳಲ್ಲಿರುವ ಪ್ರತಿಭೆ ಹೊರ ತರಲು ಪೋಷಕರು ಪ್ರಯತ್ನಿಸಬೇಕು. ಯಾವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಗುರುತಿಸಿ ಶಿಕ್ಷಕರು ಅದಕ್ಕೆ ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳ ಬೆಳವಣಿಗೆಗೆ ಮಾರ್ಗದರ್ಶಕರಾಗಬೇಕು ಎಂದರು.ಶ್ರೀ ರಾಮ ಟ್ರಸ್ಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹರಿ ಮಂದಣ್ಣ ಅಧ್ಯಕ್ಷತೆ ವಹಿಸಿದ್ದರು ನಿರ್ದೇಶಕ ಪೂಣಚ್ಚ ಮಾತನಾಡಿದರು.
ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಬಿ.ಸಿ ದೊಡ್ಡೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗುರುರಾಜ್ ಕೆ.ಪಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ. ಶಾರದಾ, ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆ ನಿರ್ದೇಶಕ ಮುತ್ತಣ್ಣ, ಬಿದ್ದಾಟಂಡ ಮುದ್ದಯ್ಯ , ಅಪ್ಪಾರಂಡ ಅಪ್ಪಯ್ಯ ಹಾಗೂ ಶಿಕ್ಷಣ ಇಲಾಖೆಯ ವಿವಿಧ ಸಂಘಗಳ ಅಧ್ಯಕ್ಷರು ಇದ್ದರು. ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾಗಮಂಡಲದ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಬಿ.ಸಿ ದೊಡ್ಡೇಗೌಡ ಸ್ವಾಗತಿಸಿದರು. ಬಿಆರ್‌ಪಿ ಮಂಜುಳಾ ಚಿತ್ರಾಪುರ ನಿರೂಪಿಸಿದರು.ಬಿ.ಎಂ.ಶಾರದಾ ವಂದಿಸಿದರು. ಬಳಿಕ ಕ್ಲಸ್ಟರ್ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಾಲೂಕು ಹಂತದ ವಿವಿಧ ಸ್ಪರ್ಧೆಗಳು ಜರುಗಿದವು.