ಕಲೆ ಕಲಾವಿದರಿಗೆ ಎಂದೂ ಸಾವಿಲ್ಲ

| Published : Oct 13 2025, 02:00 AM IST

ಸಾರಾಂಶ

ರಾಜಕಾರಣಿಗಳಿಗೆ ಅಧಿಕಾರದಲ್ಲಿದ್ದಾಗ ಒಂದು ರೀತಿ ತೂಕ, ಅಧಿಕಾರ ಕಳೆದುಕೊಂಡ ಮೇಲೆ ಮತ್ತೊಂದು ರೀತಿ ತೂಕ ಇರುತ್ತದೆ. ಆದರೆ ಕಲೆಗೆ ಮತ್ತು ಕಲಾವಿದರಿಗೆ ಎಂದೂ ಸಾವಿಲ್ಲ. ಅವರ ಸಾಧನೆ ಸದಾ ಇರುತ್ತದೆ ಎಂದು ಮಾಜಿ ಶಾಸಕ ಎಚ್. ನಿಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜಕಾರಣಿಗಳಿಗೆ ಅಧಿಕಾರದಲ್ಲಿದ್ದಾಗ ಒಂದು ರೀತಿ ತೂಕ, ಅಧಿಕಾರ ಕಳೆದುಕೊಂಡ ಮೇಲೆ ಮತ್ತೊಂದು ರೀತಿ ತೂಕ ಇರುತ್ತದೆ. ಆದರೆ ಕಲೆಗೆ ಮತ್ತು ಕಲಾವಿದರಿಗೆ ಎಂದೂ ಸಾವಿಲ್ಲ. ಅವರ ಸಾಧನೆ ಸದಾ ಇರುತ್ತದೆ ಎಂದು ಮಾಜಿ ಶಾಸಕ ಎಚ್. ನಿಂಗಪ್ಪ ಹೇಳಿದರು.

ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶ್ರೀ ಮಂಜುನಾಥ ಕಲಾ ಸಂಘದ ವತಿಯಿಂದ ಏರ್ಪಡಿಸಿದ್ದ ದಾನ ವೀರ ಶೂರ ಕರ್ಣ ಪೌರಾಣಿಕ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಹಾಗೂ ಜಿಲ್ಲೆಯ 35 ಮಂದಿ ಕಲಾ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.

ಹಲವಾರು ಕಲಾವಿದರ ಹುಟ್ಟು ಹಾಕಿ ನಾಡಿಗೆ ಕೊಡುಗೆಯಾಗಿ ನೀಡಿದ ಡಾ. ಗುಬ್ಬಿ ವೀರಣ್ಣನವರ ಹೆಸರು ಎಷ್ಟು ವರ್ಷ ಕಳೆದರೂ ಜನಮನದಲ್ಲಿ ಹಚ್ಚ ಹಸಿರಾಗಿ ಉಳಿದಿರುತ್ತದೆ. ಕಲಾವಿದನಿಗೆ ದೈಹಿಕವಾಗಿ ಸಾವಿದ್ದರೂ ಕಲೆಗೆ ಎಂದೂ ಸಾವಿಲ್ಲ ಎಂದರು.

ಕಲಾವಿದರಿಗೆ ಜೀವಮಾನದುದ್ದಕ್ಕೂ ಸಾಧನೆ ಮಾಡಲು ಅವಕಾಶ ಇರುತ್ತದೆ. ಆದರೆ ರಾಜಕಾರಣಿಗಳಿಗೆ ಅಧಿಕಾರದಲ್ಲಿದ್ದಾಗ ಮಾತ್ರ ತೂಕ ಇರುತ್ತದೆ. ಇದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಮಂಜುನಾಥ ಕಲಾ ಸಂಘದವರು ವಿಶಿಷ್ಟವಾದ ವ್ಯಕ್ತಿತ್ವ, ಕೀರ್ತಿಯನ್ನು ಗಳಿಸಿದ್ದಾರೆ. ದಾನವೀರ ಶೂರ ಕರ್ಣನ ಕಥೆಯನ್ನು ನಾಟಕದ ಮೂಲಕ ಅಭಿನಯಿಸಿ ಕಲಾ ಸಂಘದವರು ಜನಮನ ಗೆದ್ದಿದ್ದಾರೆ. ನಾಟಕಗಳ ಯಶಸ್ವಿ ಪ್ರದರ್ಶನಕ್ಕೆ ಕಲಾಭಿಮಾನಿಗಳು ಹಾಗೂ ಪ್ರೇಕ್ಷಕರ ಪಾತ್ರವೂ ಬಹು ಮುಖ್ಯ ಎಂದರು.

ಕಲಾವಿದ ಎಂ.ವಿ. ನಾಗಣ್ಣ ಮಾತನಾಡಿ, ಕಲಾವಿದರನ್ನು ಹೆಚ್ಚಿನ ರೀತಿಯಲ್ಲಿ ಗುರುತಿಸಿ ಸನ್ಮಾನ ಮಾಡಿರುವ ಕಾರ್ಯ ಉತ್ತಮವಾಗಿದೆ. ಇದು ಮಂಜುನಾಥ ಕಲಾ ಸಂಸ್ಥೆಗೆ ಕಲಾವಿದರ ಮೇಲಿರುವ ಗೌರವವನ್ನು ತೋರಿಸುತ್ತದೆ ಎಂದರು.

ಯೋಗಾನಂದ ಕುಮಾರ್ ಅವರು ಕಳೆದ 30 ವರ್ಷಗಳಿಂದ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಹೆಚ್ಚು ಶ್ರಮ ವಹಿಸಿ ಕಲಾವಿದರನ್ನು ಒಂದೆಡೆ ಕಲೆ ಹಾಕಿ ಹೆಚ್ಚಿನ ಮಟ್ಟದ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.

ಮುಖಂಡರಾದ ಹೊನ್ನಗಿರಿಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಪೌರಾಣಿಕ ನಾಟಕಗಳ ಪರಿಚಯ ಮಾಡಿಕೊಡಬೇಕು. ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುವ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ತೋರಿಸಬೇಕು ಎಂದು ಸಲಹೆ ನೀಡಿದರು.

ತುಮಕೂರು ಜಿಲ್ಲೆ ಕಲೆಯ ತವರೂರು. ಗುಬ್ಬಿ ವೀರಣ್ಣನವರು ಸಾವಿರಾರು ಕಲಾವಿದರನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ನಾಟಕ ಕಲೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯವನ್ನು ನಾವು-ನೀವೆಲ್ಲರೂ ಮಾಡಬೇಕಾಗಿದೆ ಎಂದರು.

ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಾರೆ. ವರ್ಷಕ್ಕೊಮ್ಮೆ ಹಾಗೂ ಊರಿನ ಹಬ್ಬದ ಸಮಯದಲ್ಲಿ ನಾಟಕವನ್ನು ಕಲಿತು ಪ್ರದರ್ಶಿಸುವ ಕಾರ್ಯವನ್ನು ಗ್ರಾಮೀಣ ಜನತೆ ಮಾಡುತ್ತಿದ್ದಾರೆ. ಅದೇ ರೀತಿಯ ನಗರ ಪ್ರದೇಶಗಳಲ್ಲೂ ಸಹ ಜನತೆ ನಾಟಕ ಕಲೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವೈ.ಎನ್. ಶಿವಣ್ಣ ಮಾತನಾಡಿ, ರಂಗಕಲೆಯನ್ನು ಉಳಿಸಿ ಬೆಳೆಸಲು ಇಂತಹ ನಾಟಕಗಳ ಪ್ರದರ್ಶನ ಅವಶ್ಯವಾಗಿದೆ. ಅದೇ ರೀತಿ ರಂಗಭೂಮಿ ಕಲೆಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವರ ಸಂಖ್ಯೆಯೂ ಹೆಚ್ಚಾಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೊನ್ನಗಿರಿಗೌಡ, ವೈ.ಎನ್. ಶಿವಣ್ಣ, ಯೋಗಾನಂದಕುಮಾರ್, ಶೆಟ್ಟಳ್ಳಯ್ಯ, ಮಂಜುಳ, ನಾಗಣ್ಣ, ವಸಂತಕುಮಾರ್, ಮಹದೇವಣ್ಣ, ವೆಂಕಟೇಶ್, ನಂಜಪ್ಪಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.