ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ಹೊರಸೂಸುವಂತೆ ಮಾಡುವ ಶಕ್ತಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಂತೆ ಮಾಡುವ ಜಾಣ್ಮೆ, ಕುಶಲತೆ ಚಿತ್ರಕಲಾ ಶಿಕ್ಷಕರಿಗೆ ಇದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ ಪಠ್ಯಕ್ಕಿಂತಲೂ ಮಕ್ಕಳಿಗೆ ಚಿತ್ರಗಳು ಮಸ್ತಕದಲ್ಲಿ ಉಳಿಸುತ್ತವೆ.

ಗದಗ: ಜಗತ್ತಿನಲ್ಲಿ ಯಾವುದೇ ಒಂದು ವಸ್ತು ಸೃಷ್ಟಿಯಾಗಬೇಕಾದರೆ ಅದಕ್ಕೆ ಮನಸ್ಥಿತಿ, ಬೌದ್ಧಿಕ ಸ್ಥಿತಿ ಮತ್ತು ದೈಹಿಕ ಸ್ಥಿತಿ ಬಹಳ ಮುಖ್ಯವಾಗಿದೆ. ಕಲಾವಿದರು ದೂರದೃಷ್ಟಿ ಮತ್ತು ಅಂತರದೃಷ್ಟಿ ಉಳ್ಳವರು. ಅವರಿಂದ ಭಿನ್ನವಾದ ಸೃಷ್ಟಿ ಸಾಧ್ಯ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ(ಡಯಟ್) ಪ್ರಾ. ಜಿ.ಎಂ. ಮುಂದಿನಮನಿ ತಿಳಿಸಿದರು.ನಗರದ ವಿಜಯ ಕಲಾಮಂದಿರದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಹೈಯರ್, ಲೋವರ್‌ಗ್ರೇಡ್ ಪರೀಕ್ಷೆಗೆ ಕುಳಿತುಕೊಳ್ಳುವ ಮಕ್ಕಳನ್ನು ತರಬೇತಿಗೊಳಿಸಲು ಮತ್ತು ಹೆಚ್ಚು ಅಂಕ ಪಡೆಯಲು ನೆರವಾಗುವಂತೆ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ಹೊರಸೂಸುವಂತೆ ಮಾಡುವ ಶಕ್ತಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಂತೆ ಮಾಡುವ ಜಾಣ್ಮೆ, ಕುಶಲತೆ ಚಿತ್ರಕಲಾ ಶಿಕ್ಷಕರಿಗೆ ಇದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ ಪಠ್ಯಕ್ಕಿಂತಲೂ ಮಕ್ಕಳಿಗೆ ಚಿತ್ರಗಳು ಮಸ್ತಕದಲ್ಲಿ ಉಳಿಸಿಯುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, ರಾಜ್ಯದಲ್ಲಿಯೇ ಈ ರೀತಿಯ ಗ್ರೇಡ್ ಮಕ್ಕಳಿಗೆ ಪ್ರೋತ್ಸಾಹಿಸುವ ತರಬೇತಿ ನೀಡುವ ಪ್ರಯತ್ನ ಮೊದಲು. ಈ ಪ್ರಯತ್ನದಿಂದ ಮಕ್ಕಳಲ್ಲಿ ಉತ್ಸಾಹ ಮೂಡಿ ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುವುದರಲ್ಲಿ ಸಂದೇಹವಿಲ್ಲ ಹಾಗೂ ಜಗತ್ತಿನಲ್ಲಿ ಚಿತ್ರಕಲೆಗೆ ವಿಶಿಷ್ಟ ಸ್ಥಾನವಿದ್ದು, ಇದನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕಲಿಸುವುದರಿಂದ ಪ್ರಯೋಗಾತ್ಮಕ ಕಲಿಕೆಗೆ ನೈಜ ಅರ್ಥ ಬರುತ್ತದೆ ಎಂದರು. ಡಯಟ್‌ ಹಿರಿಯ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಮಾತನಾಡಿ, ಲಲಿತಕಲೆಗಳನ್ನು ಕಲಿಸುವುದರಿಂದ ಮಕ್ಕಳನ್ನು ವಿಭಿನ್ನವಾಗಿ ಯೋಚಿಸುವಂತೆ ಮತ್ತು ಕಾರ್ಯತತ್ಪರವಾಗುವಂತೆ ಮಾಡಬಲ್ಲ ಶಕ್ತಿ ಇದೆ. ಆದ್ದರಿಂದ ಕಲೆಗಳಿಗೆ ಮಕ್ಕಳನ್ನು ತೊಡಗಿಸಿ ಪ್ರೋತ್ಸಾಹಿಸಬೇಕು. ಅವರನ್ನು ಕೇವಲ ಪಠ್ಯದ ಹುಳುಗಳಂತೆ ಮಾಡದೆ ವಿಶಿಷ್ಟರನ್ನಾಗಿ ಮಾಡುವ ಅಗತ್ಯವಿದೆ ಎಂದರು. ಪ್ರವಾಸೋದ್ಯಮ ಇಲಾಖೆ ಸಹ ನಿರ್ದೇಶಕ ಕೊಟ್ರೇಶ ವಿಭೂತಿ ಮಾತನಾಡಿ, ಮಕ್ಕಳಿಗೆ ದೇಶದ ಪರಂಪರೆಯ ಹಾಗೂ ಕಲಾತ್ಮಕ, ಐತಿಹಾಸಿಕ ತಾಣಗಳ ಪರಿಚಯವನ್ನು ಮಾಡುವುದು ಮತ್ತು ಅವುಗಳನ್ನು ಆಳವಾಗಿ ತಿಳಿದುಕೊಳ್ಳುವಂತೆ ಮಾಡುವ ಕಾರ್ಯದಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಮ್ಮ ಇಲಾಖೆಯಿಂದ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ವಿಜಯಕಲಾ ಮಂದಿರದ ಪ್ರಾ. ಕೃಷ್ಣಾ ಕೆ.ಎಂ., ವಿಜಯಕಲಾ ಮಂದಿರದ ಮುಖ್ಯಸ್ಥ ಪ್ರಕಾಶ ಅಕ್ಕಿ, ಮೊರಾರ್ಜಿ ವಸತಿಶಾಲೆಗಳ ಚಿತ್ರಕಲಾ ಅಧ್ಯಕ್ಷ ರಮಜಾನ್ ಮುತ್ತಣ್ಣವರ ಮಾತನಾಡಿದರು.

ಈ ವೇಳೆ ನಿಸರ್ಗ ವಸ್ತುಚಿತ್ರ, ನಕ್ಷಾಚಿತ್ರ ಮುಂತಾದ ಅವಧಿಗಳನ್ನು ಮತ್ತು ಪ್ರಾತ್ಯಕ್ಷಿತೆ ಮೂಲಕ ಟಿ.ಆರ್. ಬೇವಿನಮರದ, ಸರೋಜಾ ಮುಂಡೇವಾಡಿ, ಶಾರದಾ ಪರ್ವತಿ, ಕೆ.ಬಿ. ಬಡಿಗೇರ, ಮಹೇಶ ಹಿರೇಗೌಡರ, ಜೆ.ಕೆ. ಬಾಗವಾನರ, ವಿಜಯ ಕಿರೇಸೂರ ಮುಂತಾದವರು ಉಪನ್ಯಾಸ ನೀಡಿದರು.

ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅಶೋಕ ಬಾವಿ, ಶರಣಯ್ಯ ವಸ್ತ್ರದ, ನಾಗರಾಜ ಚಿತ್ರಗಾರ, ಮಹೇಶ ಸಂದಿಗೋಡ ಸೇರಿದಂತೆ ಚಿತ್ರಕಲಾ ಶಿಕ್ಷಕರು ಇದ್ದರು. ಪಂಚಾಕ್ಷರಿ ಹಿರೇಮಠ ನಿರೂಪಿಸಿದರು. ತೋಂಟೇಶ ಬೇವಿನಮರದ ಸ್ವಾಗತಿಸಿ ವಂದಿಸಿದರು.