ಸಾರಾಂಶ
ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು
ಭಾರಿ ಮಳೆಗೆ ಕೃತಕ ನೆರೆ ಆವರಿಸುವ ಮಂಗಳೂರನ್ನು ‘ನೆರೆ ಮುಕ್ತ’ ಆಗಿ ಪರಿವರ್ತಿಸಲು ಮಹಾನಗರ ಪಾಲಿಕೆ ಆಡಳಿತ ಈಗ ಪಣ ತೊಟ್ಟಿದೆ. ಡಿಜಿಟಲ್ ಸರ್ವೆ ನಡೆಸಿ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಪ್ರದೇಶಗಳನ್ನು ಗುರುತಿಸಿ ಕೈಗೊಳ್ಳಬಹುದಾದ ಶಾಶ್ವತ ಪರಿಹಾರದತ್ತ ಕಾರ್ಯಯೋಜನೆ ಹಾಕಿಕೊಂಡಿದೆ.ಧಾರಾಕಾರ ಮಳೆಗೆ ಕಳೆದ ಎರಡು ವರ್ಷಗಳಿಂದ ಮಂಗಳೂರು ನಗರದ ಹೆಚ್ಚಿನ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಈ ಹಿಂದೆ ಸುರತ್ಕಲ್ ಎನ್‌ಐಟಿಕೆ ಸರ್ವೆ ನಡೆಸಿದರೂ ಅದರ ವರದಿ ಎಲ್ಲೋ ಮೂಲೆಗುಂಪಾಗಿದೆ. ಇದರ ನಡುವೆಯೇ ಈ ಬಾರಿ ಜೂನ್ ಪ್ರಥಮದಲ್ಲೇ ಸುರಿದ ಮಳೆಗೆ ಮಂಗಳೂರು ಮಹಾನಗರ ಮುಳುಗಡೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಡಳಿತ ಕೊನೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊರಟಿದೆ.
ಏನಿದು ಡಿಜಿಟಲ್ ಸರ್ವೇ?:ಮಂಗಳೂರು ಮಹಾನಗರ ವ್ಯಾಪ್ತಿಯ 13 ಕಡೆಗಳಲ್ಲಿ ನಿರಂತರ ಮಳೆಯಾದರೆ ನೆರೆ ಆವರಿಸುತ್ತದೆ. ಪ್ರವಾಹ ಏರ್ಪಟ್ಟು ನಗರವೇ ದ್ವೀಪಸದೃಶ ವಾತಾವರಣ ಉಂಟಾಗುತ್ತದೆ. ಕೆಲವು ಕಡೆಗಳಲ್ಲಿ ಪ್ರವಾಹ ನೀರು ಇಳಿಮುಖವಾಗಲು ಗಂಟೆಗಟ್ಟಲೆ ಸಮಯ ಬೇಕು. ಇಂಥ ಪರಿಸ್ಥಿತಿ ಮುಂದಿನ ಮಳೆಗಾಲದಲ್ಲಿ ಬರಬಾರದು ಎಂಬ ದಿಶೆಯಲ್ಲಿ ಈಗ ಪ್ರವಾಹದಿಂದ ನಗರಕ್ಕೆ ಮುಕ್ತಿ ನೀಡಲು ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಜಿಡಿಟಲ್ ಸರ್ವೆ ಕಾರ್ಯಕ್ಕೆ ಇಳಿದಿದೆ.
ಡಿಜಿಪಿಎಸ್(ಡಿಜಿಟಲ್ ಜಿಯೋ ಪೋಸಿಷನಿಂಗ್ ಸಿಸ್ಟಮ್) ಮಾದರಿಯಲ್ಲಿ ಸರ್ವೆ ಕಾರ್ಯವನ್ನು ಪಾಲಿಕೆ ಎಂಜಿನಿಯರ್‌ಗಳು ನಡೆಸುತ್ತಿದ್ದಾರೆ. ರಾಜಕಾಲುವೆ ಸಾಗಿ ಬಂದ ಹಾದಿಯ ಅವಲೋಕನ ನಡೆಸಿದ್ದಾರೆ. ನೀರಿನ ವಿಪರೀತ ಹರಿವು ಪ್ರದೇಶಗಳನ್ನು ಗುರುತು ಹಾಕಿದ್ದಾರೆ. ಕಿರಿದಾದ ತೋಡು, ಕಾಲುವೆಗಳಲ್ಲಿ ಸರಾಗ ಮಳೆ ನೀರು ಹರಿವಿಗೆ ಕೈಗೊಳ್ಳಬೇಕಾದ ಕ್ರಮಗಳ ಪಟ್ಟಿ ಮಾಡಿದ್ದಾರೆ. ರಾಜ ಕಾಲುವೆಗಳ ಉದ್ದ ಅಗಲಗಳನ್ನು ಪರಿಶೀಲಿಸಿದ್ದು, ಪರ್ಯಾಯವಾಗಿ ಇನ್ನೊಂದು ರಾಜ ಕಾಲುವೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಅಗತ್ಯ ಇರುವಲ್ಲಿ ಇಂಗು ಗುಂಡಿ ರಚನೆಯ ಪ್ರಸ್ತಾಪ ಮಾಡಿದೆ.75 ವರ್ಷಗಳ ಹಿಂದೆ ಮಂಗಳೂರಲ್ಲಿ ಇದ್ದ ತೋಡು, ರಾಜ ಕಾಲುವೆಗಳು, ಈಗ ಇರುವ ವಸ್ತು ಸ್ಥಿತಿಗಳನ್ನು ಖಾಸಗಿ ಏಜೆನ್ಸಿಯಿಂದ ವಿನ್ಯಾಸದ ವರದಿ ಪಡೆಯಲಿದ್ದಾರೆ. ಇದೇ ವೇಳೆ ರಾಜ ಕಾಲುವೆಗಳ ಒತ್ತುವರಿ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದ್ದಾರೆ.
ಎಲ್ಲೆಲ್ಲಿ ಮುಳುಗಡೆ?:ಮಹಾನಗರ ಪಾಲಿಕೆಯ ಪಂಪ್‌ವೆಲ್, ಅತ್ತಾವರ 6ನೇ ಕ್ರಾಸ್, ಶಿವನಗರ, ಸುಭಾಸ್ ನಗರ, ಜೆಪ್ಪಿನಮೊಗರು, ಅಡ್ಯಾರ್ ಕಣ್ಣೂರು, ಪಡೀಲ್ ರೈಲ್ವೆ ಅಂಡರ್‌ಪಾಸ್, ಕೊಡಿಯಾಲಗುತ್ತು, ಭಗವತಿ ನಗರ, ಎಂಪೇರ್ ಮಾಲ್ ಬಳಿ, ಗುಜರಾತಿ ಶಾಲೆ, ಕೊಟ್ಟಾರಚೌಕಿ ಹಾಗೂ ಮಾಲೇಮಾರ್‌ಗಳಲ್ಲಿ ಅವ್ಯಾಹತ ಮಳೆಗೆ ಕೃತಕ ನೀರು ಆವರಿಸುತ್ತದೆ.
ಈ ಪೈಕಿ ಅತ್ತಾವರ ಮತ್ತು ಮಾಲೇಮಾರ್ ತಗ್ಗು ಪ್ರದೇಶಗಳು. ಸಾಧಾರಣ ಮಳೆ ಬಂದರೂ ಇಲ್ಲಿ ಕೃತಕ ನೆರೆ ಕಾಣಿಸಲು ಇದೇ ಕಾರಣ. ರಾಜ ಕಾಲುವೆಯ ನೀರು ಹರಿದು ಸಮುದ್ರ ಸೇರುವ ಕುದ್ರೋಳಿಯಲ್ಲಿ ನೀರಿನ ಉಬ್ಬರ ಕಂಡುಬಂದರೆ ನಗರದಲ್ಲಿ ಪ್ರವಾಹ ಉಕ್ಕೇರುತ್ತದೆ. ನೀರು ಸಮುದ್ರ ಕಡೆಗೆ ಹೋಗದೆ, ವಾಪಸ್ ಬರುತ್ತದೆ. ಈ ಸಂಗತಿಗಳನ್ನು ಸರ್ವೆ ಕಾರ್ಯ ವೇಳೆ ಎಂಜಿನಿಯರ್‌ಗಳ ತಂಡ ಗಮನಿಸಿ ಪರಿಹಾರ ಕ್ರಮಕ್ಕೆ ಮುಂದಾಗಿದೆ. ..........................ಪಂಪ್‌ವೆಲ್‌ಗೆ 4 ಕೋಟಿ ರು.
ಪಂಪ್‌ವೆಲ್‌ನಲ್ಲಿ ಕಾಂಕ್ರಿಟ್ ಕಾಮಗಾರಿಗೆ ಪಾಲಿಕೆ ನಿಧಿಯಿಂದ 4 ಕೋಟಿ ರು. ಮಂಜೂರುಗೊಂಡಿದೆ. ಈ ಮೊತ್ತದಲ್ಲಿ ಜೆಪ್ಪಿನಮೊಗರು ಕಡೆ ರಸ್ತೆಯನ್ನು ಎತ್ತರಿಸಿ ಕಾಂಕ್ರಿಟ್‌ಗೊಳಿಸಲಾಗುತ್ತದೆ. ತೋಡನ್ನು ಅಗಲಗೊಳಿಸುವ ಕಾಮಗಾರಿಯೂ ನಡೆಯಲಿದೆ.ಶಿವನಗರದಲ್ಲಿ ಶಿಥಿಲಗೊಂಡ ಕಾಲು ಸಂಕಗಳನ್ನು ತೆರವುಗೊಳಿಸಿ ನೀರು ಸರಾಗ ಹರಿಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಚರಂಡಿಯ ಹೂಳೆತ್ತುವ ಕಾರ್ಯವೂ ನಡೆಯಲಿದೆ. ಟಿಎಂಎ ಪೈ ಇಂಟರ್‌ನ್ಯಾಷನಲ್ ಹಾಲ್ ಬಳಿಯ ತೋಡಿಗೆ ಎಂಜಿ. ರಸ್ತೆಯಲ್ಲಿ ಮೋರಿ ತೆಗೆದು ಬಾಕ್ಸ್ ಮಾದರಿಯ ಸೇತುವೆ ರಚಿಸಲು ತೀರ್ಮಾನಿಸಲಾಗಿದೆ. ಸೇತುವೆ ಕಾಮಗಾರಿಗಾಗಿ ಒಂದು ಬದಿ ವಾಹನ ಸಂಚಾರ ನಿಯಂತ್ರಿಸುವಂತೆ ಪೊಲೀಸ್ ಕಮಿಷನರ್‌ಗೆ ಪಾಲಿಕೆ ಅಧಿಕಾರಿಗಳು ಪತ್ರ ಬರೆದು ವಿನಂತಿಸಿದ್ದಾರೆ.
ತಿಂಗಳಲ್ಲಿ ಸಮಗ್ರ ವರದಿಗೆ ಶಾಸಕ ಸೂಚನೆಮಂಗಳೂರಲ್ಲಿ ಭಾರಿ ಮಳೆಗೆ ಮುಳುಗಡೆಯಾಗುವ ಪ್ರದೇಶಗಳ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಸರ್ವೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಮಳೆಹಾನಿ ಬಗ್ಗೆ ಕೂಡ ಸಮಗ್ರ ವರದಿ ಸಲ್ಲಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಳುಗಡೆ ಪ್ರದೇಶಗಳ ಕುರಿತಂತೆ ಎನ್‌ಐಟಿಕೆ ವರದಿಯನ್ನೂ ಮುಂದಿಟ್ಟುಕೊಂಡು ಈಗಿನ ಸರ್ವೆ ವರದಿಯನ್ನು ಸೇರಿಸಿ ಶಾಶ್ವತ ಪರಿಹಾರ ಕ್ರಮಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾಮತ್ ಪ್ರತಿಕ್ರಿಯಿಸಿದ್ದಾರೆ................
ಪಾಲಿಕೆ ಎಂಜಿನಿಯರ್‌ಗಳು ಹಾಗೂ ಖಾಸಗಿ ಏಜೆನ್ಸಿ ವತಿಯಿಂದ ನಗರದ ಮುಳುಗಡೆ ಪ್ರದೇಶಗಳ ಸರ್ವೆ ಕಾರ್ಯ ನಡೆದು ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆ ಬಳಿಕ ಜಿಲ್ಲಾಡಳಿತ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.-ರವಿಚಂದ್ರ ನಾಯಕ್, ಆಯುಕ್ತರು, ಮಹಾನಗರ ಪಾಲಿಕೆ
;Resize=(128,128))
;Resize=(128,128))
;Resize=(128,128))