ಸಾರಾಂಶ
ಇಂದಿನ ಅತ್ಯಾಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಎಷ್ಟೇ ಮುಂದುವರೆದರೂ ಮಾನವ ಯುಕ್ತಿಗಿಂತ ಮಿಗಿಲಾಗಲು ಅಸಾಧ್ಯ ಉಪನ್ಯಾಸಕ ಪಾಂಡುರಂಗ ಪಾರ್ಥಸಾರಥಿ ಹೇಳಿದರು.
ಕುಮಟಾ: ಕೃತಕ ಬುದ್ದಿಮತ್ತೆ (ಎಐ) ಎಂಬುದು ಹೃದಯವಿಲ್ಲದ ಮೆದುಳು. ಆದರೆ ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಭಾಗವಾಗಿದೆ. ಮನುಷ್ಯ ಒಂದಿಲ್ಲೊಂದು ಬಗೆಯಲ್ಲಿ ಕೃತಕ ಬುದ್ಧಿಮತ್ತೆಯ ಜಾಲಕ್ಕೆ ಸಿಲುಕಿದ್ದಾನೆ ಎಂದು ವಿಧಾತ್ರಿ ಅಕಾಡೆಮಿಯ ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಪಾಂಡುರಂಗ ಪಾರ್ಥಸಾರಥಿ ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ''''ಶಿಕ್ಷಕರ ಶಿಕ್ಷಣ ಯೋಜನೆ’ ಸಹಯೋಗದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ. ಪ್ರೌಢಶಾಲೆಯಲ್ಲಿ ಶುಕ್ರವಾರ ಆರಂಭಗೊಂಡ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಬಲವರ್ಧನಾ ಮತ್ತು ಕೃತಕ ಬುದ್ಧಿಮತ್ತೆ ಪರಿಚಯ ಕಾರ್ಯಾಗಾರ ಹಾಗೂ ಜಿಲ್ಲಾಮಟ್ಟದ ವಿಜ್ಞಾನ ಪ್ರಯೋಗ ಮಾದರಿ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಇಂದಿನ ಅತ್ಯಾಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಎಷ್ಟೇ ಮುಂದುವರೆದರೂ ಮಾನವ ಯುಕ್ತಿಗಿಂತ ಮಿಗಿಲಾಗಲು ಅಸಾಧ್ಯ. ಪ್ರಯೋಗಾಲಯ ಮಕ್ಕಳಲ್ಲಿ ಸಂಶೋಧನಾ ಮತ್ತು ನಾವೀನ್ಯತಾ ಗುಣವನ್ನು ಹೆಚ್ಚಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಡಿ.ಡಿ. ಕಾಮತ ಮಾತನಾಡಿ, ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಬುದ್ಧಿಮತ್ತೆಯ ಅನಾವರಣಕ್ಕಾಗಿ ವೇದಿಕೆ ಕಲ್ಪಿಸಿದಂತಾಗಿದೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದು, ತಮ್ಮ ಕಲ್ಪನಾಲೋಕದ ವಿಜ್ಞಾನ ಮಾದರಿಗಳನ್ನು ಸಂಶೋಧಿಸಿ ಸಮಾಜದಲ್ಲಿ ಬೆಳೆಯಲಿ ಎಂದರು.
ಕೃತಕ ಬುದ್ಧಿಮತ್ತೆ ಪರಿಚಯ ಕಾರ್ಯಾಗಾರದಲ್ಲಿ ಸಾಗರದ ಹೊಂಗಿರಣ ಪಿಯು ಕಾಲೇಜಿನ ಪ್ರಾಚಾರ್ಯ ರೋಹಿತ ವಿ., ಅಟಲ್ ಟಿಂಕರಿಂಗ್ ಲ್ಯಾಬ್‌ನ ಕಾರ್ಯವೈಖರಿಯ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಶಿಕ್ಷಕರಿಗೆ ಉಪನ್ಯಾಸದ ಮೂಲಕ ವಿವರಿಸಿದರು.ಡಯಟ್‌ನ ಉಪನ್ಯಾಸಕಿ ಡಾ. ಶುಭಾ ನಾಯಕ ಮಾತನಾಡಿದರು. ಮುಕ್ತಾ ನಾಯಕ, ಶೈಕ್ಷಣಿಕ ಸಲಹೆಗಾರ ಆರ್. ಎಚ್. ದೇಶಭಂಡಾರಿ, ಸರಸ್ವತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಕಿರಣ ಭಟ್ಟ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು ವಿಜ್ಞಾನ ಪ್ರಯೋಗ ಮಾದರಿ ಪ್ರದರ್ಶಿಸಿದರು. ಮುಖ್ಯಶಿಕ್ಷಕಿ ಸುಮಾ ಪ್ರಭು ಸ್ವಾಗತಿಸಿದರು. ಅಮಿತಾ ಗೋವೆಕರ ಪ್ರಾಸ್ತಾವಿಕ ಮಾತನಾಡಿದರು. ವಿನಯಾ ನಾಯಕ ನಿರೂಪಿಸಿದರು. ಪೂರ್ಣಿಮಾ ಶಾನಭಾಗ ವಂದಿಸಿದರು.