ಸಾರಾಂಶ
ಯಲ್ಲಾಪುರ: ಆಧುನಿಕತೆಯ ತಂತ್ರಜ್ಞಾನವು ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿದೆ. ಕೃತಕ ಬುದ್ಧಿಮತ್ತೆಯು ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ ಆವಿಷ್ಕಾರವಾಗಿದೆ. ಎಐನ ಉಪಕ್ರಮಗಳೇ ನಮ್ಮನ್ನು ಮುಂದೆ ಆಳಲಿದೆ ಎಂದು ಕಾರವಾರ ಮತ್ತು ಧಾರವಾಡ ಜಿಲ್ಲೆಯ ಎಐ ಕೃತಕ ಬುದ್ಧಿಮತ್ತೆಯ ಮಾಸ್ಟರ್ ತರಬೇತುದಾರ ಶಿವಯ್ಯ ಗೋಡಿಮನಿ ತಿಳಿಸಿದರು.
ವಜ್ರಳ್ಳಿಯ ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಆ. ೧೭ರಂದು ಕೃತಕ ಬುದ್ಧಿಮತ್ತೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಯೋಗಿಕವಾಗಿ ಜಿಲ್ಲೆಯ ಆಯ್ದ ೮ ತಾಲೂಕಿನ ೮೫ ಗ್ರಾಪಂಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ರಾಜ್ಯಾದ್ಯಂತ ಈ ಕಾರ್ಯಕ್ರಮ ಅನುಷ್ಠಾನ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು.ಈ ತರಬೇತಿಯಲ್ಲಿ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶ ಮತ್ತು ಜನರೇಟಿವ್ ಎಐ ಪರಿಕರಗಳು, ಎಐ ಪ್ರಾಂಪ್ಟ್ ತಂತ್ರಗಳ ಕಲಿಕೆ ಮತ್ತು ಶೈಕ್ಷಣಿಕ ಮತ್ತು ವೃತ್ತಿಜೀವನದ ಅನ್ವೇಷಣೆಗಳಲ್ಲಿ ಜನರೇಟಿವ್ ಎಐಅನ್ನು ಹೇಗೆ ಬಳಸಬೇಕು ಎಂಬುದನ್ನು ಆ್ಯಪ್‌ಗಳಾದ ಚಾಟ್ ಜಿಪಿಟಿ, ಜೇಮಿನಿ, ಮೈಕ್ರೋಸಾಫ್ಟ್ ಸುನೋ, ಇನ್‌ವಿಡೀಯೊ ಆ್ಯಪ್‌ಗಳ ಬಳಕೆ ಮಾಡಿಕೊಂಡು ೪ ಅಧಿವೇಶನಗಳಲ್ಲಿ ಹಂತ- ಹಂತವಾಗಿ ತರಬೇತಿಗೊಳಿಸಲಾಗುತ್ತದೆ ಎಂದರು. ತರಬೇತಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ವ್ಯಾಪ್ತಿಯ ಪದವಿ ಯುವಕರು ಹಾಗೂ ವಜ್ರಳ್ಳಿಯ ಗ್ರಂಥಾಲಯ ಮೇಲ್ವಿಚಾರಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು.