ಕೃತಕ ಬುದ್ಧಿಮತ್ತೆಯು ಸಾಹಿತ್ಯಕ್ಕೆ ಸವಾಲಾಗದು

| Published : Sep 13 2024, 01:46 AM IST

ಸಾರಾಂಶ

ದಾವಣಗೆರೆಯ ಡಿಆರ್‌ಆರ್ ಶಾಲೆಯಲ್ಲಿ ನಡೆದ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳವನ್ನು ಡಾ.ಎಚ್.ಬಿ.ಮಂಜುನಾಥ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃತಕ ಬುದ್ಧಿಮತ್ತೆಯು ಜ್ಞಾನ ವಿಜ್ಞಾನಗಳಿಗೆ ಸವಾಲಾಗಬಹುದೇ ವಿನಃ ಸಾಹಿತ್ಯ ಸಂಸ್ಕೃತಿಗಳಿಗೆ ಸವಾಲಾಗಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು.

ಗುರುವಾರ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾ ಸಂಸ್ಥೆಯ ಪ್ರೌಢಶಾಲೆಯಲ್ಲಿ ದಿ.ರಾಜನಹಳ್ಳಿ ಆರ್.ಶ್ರೀನಿವಾಸಮೂರ್ತಿ ಸ್ಮರಣಾರ್ಥ ಅಂತರ ಪ್ರೌಢಶಾಲಾ ಬಾಲಕ-ಬಾಲಕಿಯರ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜ್ಞಾನ ವಿಜ್ಞಾನಗಳು ಬುದ್ಧಿಗೆ ಸಂಬಂಧವಾದ್ದರಿಂದ ಕೃತಕ ಬುದ್ಧಿಮತ್ತೆಯು ಇದಕ್ಕೆ ಸವಾಲಾಗಬಹುದು. ಆದರೆ ಸಾಹಿತ್ಯ ಸಂಸ್ಕೃತಿಯು ಭಾವನೆಗಳಿಗೆ ಸಂಬಂಧಪಟ್ಟಿದ್ದು. ಕೃತಕ ಬುದ್ಧಿಮತ್ತೆಯು ಇದನ್ನು ಸೃಷ್ಟಿಸಲು ಅಥವಾ ಮೆಟ್ಟಿ ನಿಲ್ಲಲು ಸಾಧ್ಯವಿಲ್ಲ. ಬದುಕು ಕಟ್ಟಿಕೊಳ್ಳಲು ಶಿಕ್ಷಣ ಹಾಗೂ ವಿಜ್ಞಾನ ಬೇಕಾದರೆ ಬದುಕಿನ ಆನಂದ ಕಂಡುಕೊಳ್ಳಲು ಸಾಹಿತ್ಯ ಸಂಸ್ಕೃತಿಗಳು ಬೇಕು. ವಿದ್ಯಾರ್ಥಿ ದೆಸೆಯಿಂದಲೇ ಇದರಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಇದಕ್ಕಾಗಿ ಇಂತಹ ಮೇಳಗಳು ಪೂರಕವಾಗಿವೆ ಎಂದು ಹೇಳಿದರು.

ವಿದ್ಯಾ ಸಂಸ್ಥೆಯ ಅಧ್ಯಕ್ಷ ಆರ್.ಆರ್.ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಎ.ಎಂ.ಬಸವನಗೌಡ, ಎಚ್.ಎಸ್.ಹಾಲೇಶ್, ಆರ್.ಭೋಜರಾಜ್ ಯಾದವ್, ಕೆಎಲ್ ರಾಧಾ, ಆಡಳಿತಾಧಿಕಾರಿ ಎಂ.ಬಸವರಾಜಪ್ಪ, ಸಹ ಶಿಕ್ಷಕ ಕೆ.ಎಂ. ಶಿವಾನಂದಯ್ಯ, ಸಿ.ಎಸ್.ತೇಜಸ್ವಿನಿ, ತೀರ್ಪುಗಾರರಾದ ಶಿವಬಸಮ್ಮ, ಸಾಹಿತಿ ಗಂಗಾಧರ ನಿಟ್ಟೂರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.