ಸಾಲದ ಶೂಲಕ್ಕೆ ಸಿಲುಕಿರುವ ಜಿಲ್ಲೆಯ ಕಲಾವಿದರು!

| Published : Oct 31 2023, 01:15 AM IST

ಸಾರಾಂಶ

ರಾಮನಗರ: ನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಕಲಾ ಪ್ರಕಾರಗಳನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಕಲಾವಿದರು ಇದೀಗ ಸಾಲದ ಶೂಲಕ್ಕೆ ಸಿಲುಕಿದ್ದಾರೆ.
ರಾಮನಗರ: ನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಕಲಾ ಪ್ರಕಾರಗಳನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಕಲಾವಿದರು ಇದೀಗ ಸಾಲದ ಶೂಲಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಮಹನೀಯರ ಜಯಂತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಣ್ಯಾತಿಗಣ್ಯರ ಭೇಟಿ ಕಾರ್ಯಕ್ರಮಗಳಿಗೆ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ವಿಶೇಷ ಮೆರಗು ತುಂಬುತ್ತಾರೆ. ಈ ರೀತಿ ಪ್ರದರ್ಶನ ನೀಡಿದ ನೂರಾರು ಕಲಾವಿದರಿಗೆ ಕಳೆದ ಮೂರು ವರ್ಷಗಳಾದರೂ ಗೌರವ ಸಂಭಾವನೆ ಕೈಸೇರಿಲ್ಲ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಎಡತಾಕುತ್ತಿದ್ದಾರೆ. ಚನ್ನಪಟ್ಟಣ ತಾಲೂಕು ಕುಂತೂರುದೊಡ್ಡಿ ಗ್ರಾಮದವರಾದ ತಮಟೆ ಕಲಾವಿದ ಎಚ್.ಪುಟ್ಟರಾಜುರವರು ಮಾಹಿತಿ ಹಕ್ಕಿನಲ್ಲಿ ಪಡೆದಿರುವ ಮಾಹಿತಿ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2021-22ರಿಂದ 2022 -23ನೇ ಸಾಲಿನವರೆಗೆ ಸುಮಾರು 1.10 ಕೋಟಿ ರುಪಾಯಿಗಳಷ್ಟು ಗೌರವ ಸಂಭಾವನೆ ಬಾಕಿ ಉಳಿಸಿಕೊಂಡಿದೆ. ಆದರೆ, ಇಲಾಖೆ ಅಧಿಕಾರಿಗಳು ಮಾತ್ರ ಕೇವಲ 71 ಲಕ್ಷ ರುಪಾಯಿಗಳಷ್ಟೇ ಬಾಕಿಯಿದೆ ಎನ್ನುತ್ತಿದ್ದಾರೆ. ಪ್ರತಿ ತಂಡಕ್ಕೆ 20 ಸಾವಿರ: ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಇತರ ಸಂಘ–ಸಂಸ್ಥೆಗಳು ಆಯೋಜಿಸುವ ಸಮಾರಂಭಗಳಲ್ಲೂ ಕಲಾ ತಂಡಗಳ ಪ್ರದರ್ಶನಕ್ಕೆ ಇಲಾಖೆಯು ಪ್ರಾಯೋಜನೆ ನೀಡುತ್ತದೆ. ಪ್ರತಿ ಪ್ರದರ್ಶನಕ್ಕೆ ತಂಡವೊಂದಕ್ಕೆ 20 ಸಾವಿರ ರುಪಾಯಿ ನೀಡಲಾಗುತ್ತದೆ. ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ, ತಮಟೆ, ವಾದ್ಯಗೋಷ್ಠಿ, ವೀರಗಾಸೆ, ಕಂಸಾಳೆ ನೃತ್ಯ, ಗೊಂಬೆ ಕುಣಿತ, ನಗಾರಿ ಸೇರಿದಂತೆ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಕಲಾವಿದರಿದ್ದಾರೆ. 2022ರ ಸೆಪ್ಟೆಂಬರ್‌ ತಿಂಗಳಿನಿಂದ 2023ರ ಮಾರ್ಚ್‌ವರೆಗೆ ಜಿಲ್ಲೆಯ ನೂರಾರು ಕಲಾ ತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜನೆ ನೀಡಲಾಗಿದೆ. ಕಲಾವಿದರಿಗೆ ಸುಮಾರು 80 ಲಕ್ಷ ಗೌರವಧನ ಪಾವತಿಸಬೇಕಾಗಿದೆ. ಇನ್ನು 2021ನೇ ಸಾಲಿನಲ್ಲಿ ಬಾಕಿಯಿದ್ದ 30 ಲಕ್ಷ ರು.ಗಳ ಪೈಕಿ 21 ಲಕ್ಷ ರುಪಾಯಿ ಪಾವತಿಯಾಗಿದ್ದು, ಉಳಿಕೆ 9 ಲಕ್ಷ ರುಪಾಯಿ ಕಲಾವಿದರಿಗೆ ಪಾವತಿ ಮಾಡಬೇಕಾಗಿದೆ. ಕಲಾ ಪ್ರದರ್ಶನಕ್ಕೆ ಆದೇಶ ಪ್ರತಿ ನೀಡಿಲ್ಲ ಎಂದು ಕಾರಣ ಹೇಳಿಕೊಂಡು ಬಿಲ್‌ ಪಾವತಿ ಮಾಡುವುದನ್ನು ಇಲಾಖೆ ತಡೆ ಹಿಡಿದಿದೆ. ಬಡ್ಡಿಗೆ ಸಾಲ ಪಡೆದಿರುವ ಕಲಾವಿದರು: ಈ ಕಲಾವಿದರಲ್ಲಿ ಯಾರೂ ಆರ್ಥಿಕವಾಗಿ ಸ್ಥಿತಿವಂತರಲ್ಲ. ಕಲಾ ಪ್ರದರ್ಶನದಿಂದ ಬರುವ ಸಂಭಾವನೆಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಪ್ರತಿಯೊಂದು ತಂಡದಲ್ಲಿ 8 ಕಲಾವಿದರು ಇರುತ್ತಾರೆ. ಈ ಕಲಾವಿದರು ಕಾರ್ಯಕ್ರಮ ನೀಡಬೇಕಾದರೆ ಊಟ ತಿಂಡಿ, ಸಾರಿಗೆ ವೆಚ್ಚಕ್ಕೆಂದು ಸಾಲ ಮಾಡಿ ಹಣ ಖರ್ಚು ಮಾಡಿದ್ದಾರೆ. ಪ್ರತಿ ಕಲಾವಿದರಿಗೆ ಕನಿಷ್ಠ 2 ಲಕ್ಷ ದಿಂದ ಗರಿಷ್ಠ 8 ಲಕ್ಷದವರೆಗೆ ಪ್ರಾಯೋಜನ ಹಣ ಪಾವತಿ ಆಗಬೇಕಾಗಿದೆ. ಇಲಾಖೆ ಮೂರು ವರ್ಷಗಳಿಂದ ಪ್ರಾಯೋಜನ ಹಣ ಬಿಡುಗಡೆ ಮಾಡದಿರುವುದರಿಂದ ಕಲಾವಿದರು ಸಾಲದ ಸುಳಿಗೆ ಸಿಲುಕಿದ್ದಾರೆ. ಕೋಟ್ ......... 2022-23ನೇ ಸಾಲಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇವಾ ಸಿಂಧು ಆನ್‌ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಸಂಘ ಸಂಸ್ಥೆಗಳಿಗೆ ಪ್ರಾಯೋಜನೆ ನೀಡಲಾಗಿದೆ. ಇದರ ಬಿಲ್ ಬಾಕಿ 62 ಲಕ್ಷ ರುಪಾಯಿಗಳಿದ್ದು, ಅನುದಾನ ಮಂಜೂರು ಮಾಡುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. - ರಮೇಶ್ ಬಾಬು, ಪ್ರಭಾರ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ಕೋಟ್ ........... ನಮ್ಮ ತಂಡಕ್ಕೆ 2 ಲಕ್ಷ ರುಪಾಯಿಗಳಷ್ಟು ಗೌರವ ಸಂಭಾವನೆ ಬಾಕಿ ಇದೆ. ನನ್ನಂತಹ ನೂರಾರು ಕಲಾವಿದರಿಗೆ ಸಂಭಾವನೆ ಬಿಡುಗಡೆಯಾಗದೆ ಅನ್ಯಾಯವಾಗಿದೆ. ಬಡಪಾಯಿ ಕಲಾವಿದರ ಬದುಕು ಹಾಗೂ ಕುಟುಂಬ ನಿರ್ವಹಣೆ ಸವಾಲಾಗಿದೆ. ನಾವೂ ಮನವಿ ಮಾಡಿ ಸಾಕಾಗಿದೆ. ಹೀಗೆಯೇ ನಿರ್ಲಕ್ಷ್ಯ ಮಾಡಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ರೂಪಿಸುತ್ತೇವೆ. -ಎಂ.ಮಹೇಶ್, ಅಧ್ಯಕ್ಷರು, ಜಿಲ್ಲಾ ಜಾನಪದ ಕಲಾವಿದರ ಸಂಘ, ರಾಮನಗರ ಕೋಟ್ ............... ನನಗೀಗ 48 ವರ್ಷ ವಯಸ್ಸಾಗಿದ್ದು, ಕಲೆ ಬಿಟ್ಟು ಬೇರೇನೂ ಗೊತ್ತಿಲ್ಲ. ಸಾಲಸೋಲ ಮಾಡಿ ಕಲಾ ಪ್ರದರ್ಶನ ನೀಡಿದ್ದೇವೆ. ಯಾವ ಉದ್ಯೋಗ ಅರಸಿ ಹೋಗಲಿ. ಸಂಸಾರ ನಡೆಸಲು ಕಷ್ಟವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರನ್ನು ನಡೆಸಿಕೊಳ್ಳುತ್ತಿರುವ ಕ್ರಮ ಸರಿಯಾಗಿಲ್ಲ. -ಶ್ರೀನಿವಾಸ್, ಪೂಜಾ ಕುಣಿತ ಕಲಾವಿದರು, ಕೋಟ್ .............. ಕಲೆಯನ್ನೇ ನಂಬಿದಕ್ಕೆ ಈಗ ನನ್ನ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಮಾಡಿಸಲಾಗದ ಸ್ಥಿತಿಗೆ ಬಂದಿದ್ದೇನೆ. ಮಾಡಿದ ಸಾಲ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಜಿಲ್ಲೆಯ ಕಲಾವಿದರಿಗೆ 1 ಕೋಟಿ 10 ಲಕ್ಷ ರುಪಾಯಿ ಗೌರವ ಸಂಭಾವನೆ ಪಾವತಿ ಆಗಬೇಕಾಗಿದ್ದು, ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕಲಾವಿದರ ಸಂಭಾವನೆ ಬಿಡುಗಡೆಗೆ ಮಾತ್ರ ಮೀನಮೇಷ ಎಣಿಸುತ್ತಿದ್ದಾರೆ. - ಪುಟ್ಟರಾಜು, ತಮಟೆ ಕಲಾವಿದ, ಕುಂತೂರುದೊಡ್ಡಿ, ಚನ್ನಪಟ್ಟಣ ತಾಲೂಕು 30ಕೆಆರ್ ಎಂಎನ್‌ 1,2,3,4.ಜೆಪಿಜಿ 1.ಎಂ.ಮಹೇಶ್, ಅಧ್ಯಕ್ಷರು, ಜಿಲ್ಲಾ ಜಾನಪದ ಕಲಾವಿದರ ಸಂಘ, ರಾಮನಗರ. 2.ಶ್ರೀನಿವಾಸ್, ಪೂಜಾ ಕುಣಿತ ಕಲಾವಿದರು, 3.ಪುಟ್ಟರಾಜು, ತಮಟೆ ಕಲಾವಿದ, ಕುಂತೂರುದೊಡ್ಡಿ, ಚನ್ನಪಟ್ಟಣ ತಾಲೂಕು. 4.ರಾಮನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ.