ಆರ್ಯಭಟ್‌ ಟೆಕ್‌ ಪಾರ್ಕ್‌ನಲ್ಲಿನ ನಿವೇಶನ ಪಡೆದವರು ಅದೇ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೋ ಇಲ್ವೋ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸಲು ಪಾಲಿಕೆ ನಿರ್ಣಯ ಕೈಗೊಂಡಿತು.

ಹುಬ್ಬಳ್ಳಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಆರ್ಯಭಟ್‌ ಟೆಕ್‌ ಪಾರ್ಕ್‌ನಲ್ಲಿನ ನಿವೇಶನ ಪಡೆದವರು ಅದೇ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೋ ಇಲ್ವೋ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸಲು ನಿರ್ಧರಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಅಲ್ಲಿನ ದೀಕ್ಷಾ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಿರುವ ನಿವೇಶನವನ್ನು ವಾಪಸ್‌ ಪಡೆಯಲು ನಿರ್ಣಯ ಕೈಗೊಂಡಿತು.

ಪಾಲಿಕೆ ಸಾಮಾನ್ಯಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವ ಪಾಲಿಕೆ, ಆರ್ಯಭಟ್‌ ಟೆಕ್‌ ಪಾರ್ಕ್‌ನಲ್ಲಿ 2007ರಲ್ಲಿ ಏಳು ಕಂಪನಿಗಳಿಗೆ ನಿವೇಶನ ನೀಡಲಾಗಿದೆ. ಆದರೆ, ಅಲ್ಲಿ ನಿವೇಶನ ಪಡೆದಿರುವ ಕಂಪನಿಗಳು ತಾವು ಪಡೆದಿರುವ ನಿವೇಶನಗಳಲ್ಲಿ ಐಟಿ-ಬಿಟಿ ಕಂಪನಿಗಳನ್ನು ಪ್ರಾರಂಭಿಸಿಲ್ಲ. ಜತೆಗೆ ಕಡಿಮೆ ದರದಲ್ಲಿ ಪಡೆದು ಮಾರಾಟ ಮಾಡಲೂ ಯತ್ನಿಸುತ್ತಿವೆ ಎಂದು ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಆರೋಪಿಸಿದರು.

ಅದಕ್ಕೆ ಅಧಿಕಾರಿಗಳು, ದೀಕ್ಷಾ ಟೆಕ್ನಾಲಜಿ ಕಂಪನಿಯೊಂದು ನಿವೇಶನ ಪಡೆದ ಉದ್ದೇಶಕ್ಕೆ ಬಳಸುತ್ತಿಲ್ಲವಷ್ಟೇ. ಉಳಿದ ಆರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ವಲಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದಾರೆ. ಆದಕಾರಣ ದೀಕ್ಷಾ ಟೆಕ್ನಾಲಜಿ ಕಂಪನಿಯಿಂದ ನಿವೇಶನ ವಾಪಸ್‌ ಪಡೆಯಲಾಗುವುದು ಎಂದರು.

ಅದಕ್ಕೆ ಈರೇಶ ಅಂಚಟಗೇರಿ, ಅಲ್ಲಿ ಯಾವ ಕಂಪನಿಗಳಿಗೆ ನಿವೇಶನ ನೀಡಲಾಗಿದೆ. ಯಾವ್ಯಾವ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸುವುದು ಸೂಕ್ತ ಎಂದರು. ಅದಕ್ಕೆ ಧ್ವನಿ ಗೂಡಿಸಿದ ವೀರಣ್ಣ ಸವಡಿ, ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಮುಂದೆ ಮುಡಾದಂತೆ ಇಲ್ಲಿಯೂ ಹಗರಣವಾಗಬಾರದು ಎಂದರು.

ಸದನ ಸಮಿತಿ ರಚನೆಗೆ ಅಸ್ತು ಎಂದು ರೂಲಿಂಗ್‌ ನೀಡಿದ ಮೇಯರ್‌, ದೀಕ್ಷಾದಿಂದ ನಿವೇಶನ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಪ್ರಕಟಿಸಿದರು.

ಪಂಚಾಯತಿಗಳಿಂದ ವಿರೋಧ

ಈ ನಡುವೆ ಪಾಲಿಕೆ ವ್ಯಾಪ್ತಿ ವಿಸ್ತರಣೆ ಕುರಿತಂತೆ ಈ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ರಾಯನಾಳ, ಅಂಚಟಗೇರಿ, ಯರಿಕೊಪ್ಪ, ಮನಸೂರ, ಬೇಲೂರ ಗ್ರಾಮಗಳ ಕೆಲ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ಆದರೆ ಪಾಲಿಕೆಗೆ ಸೇರಿಸಲು ಅಲ್ಲಿನ ಪಂಚಾಯತಿಗಳು ಒಪ್ಪುತ್ತಿಲ್ಲ ಎಂದು ನಗರ ಯೋಜನೆ ವಿಭಾಗದ ಉಪನಿರ್ದೇಶಕಿ ಮೀನಾಕ್ಷಿ ಸಭೆಗೆ ತಿಳಿಸಿದರು.

ವಾಗ್ದಾಳಿ

ಅಮೃತ್‌ ಯೋಜನೆಯ ಕಾಮಗಾರಿಯ ಟೆಂಡರ್‌ನ್ನು ಡಿಎಂಎ (ಪೌರಾಡಳಿತ ನಿರ್ದೇಶನಾಲಯ) ಕರೆಯುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಲಿಕೆ ಸದಸ್ಯರು, ಎಲ್ಲ ಟೆಂಡರ್‌ಗಳನ್ನು ಡಿಎಂಎ ಕರೆಯುತ್ತಿದ್ದರೆ, ಪಾಲಿಕೆ ಏಕೆ ಬೇಕು. ಇಲ್ಲಿನ ಆಯುಕ್ತರು, ಎಂಜಿನಿಯರ್‌ಗಳೆಲ್ಲ ಏಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಅಮೃತ ಯೋಜನೆ-2ಗೆ ಪಾಲಿಕೆ ಶೇ 26.50ರಷ್ಟು ವಂತಿಕೆ ಕೊಟ್ಟು ಅಲ್ಲಿಂದಲೇ ಟೆಂಡರ್‌ ಕರೆದು ಕಾಮಗಾರಿ ನಿರ್ವಹಿಸುವುದು ಸರಿಯಲ್ಲ. ಕಾಮಗಾರಿ ನಿರ್ವಹಿಸಲು ಪಾಲಿಕೆ ಸಮರ್ಥವಿದ್ಧು ಇಲ್ಲಿಂದಲೇ ಟೆಂಡರ್‌ ಕರೆಯುವುದಾದರೆ ಮಾತ್ರ ಠರಾವ್‌ ಪಾಸ್‌ ಮಾಡಬೇಕು. ಇಲ್ಲದಿದ್ದಲ್ಲಿ ಅದಕ್ಕೆ ಅನುಮತಿ ನೀಡಬಾರದು. ಈ ಬಗ್ಗೆ ರಾಜ್ಯಪಾಲರ ಗಮನ ಸೆಳೆಯೋಣ ಎಂಬ ಸಲಹೆಯನ್ನು ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ ನೀಡಿದರು. ಇದಕ್ಕೆ ಪ್ರತಿಪಕ್ಷದ ನಾಯಕ ರಾಜಶೇಖರ ಕಮತಿ, ರಾಜ್ಯಮಟ್ಟದಲ್ಲಿ ಟೆಂಡರ್‌ ಕರೆದರೂ ಇಲ್ಲಿನವರೂ ಟೆಂಡರ್‌ ಹಾಕಬಹುದು. ಹಾಗಾಗಿ ಪೌರಾಡಳಿತ ನಿರ್ದೇಶನಾಲಯ ಟೆಂಡರ್‌ ಕರೆಯುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು. ಆದರೆ, ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರು. ಇದು ಪಾಲಿಕೆ ಆಡಳಿತ ಮಂಡಳಿ ಹಕ್ಕುಚ್ಯುತಿಯಾಗುತ್ತದೆ. ಆದಕಾರಣ ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರೋಣ ಎಂದು ಸಲಹೆ ನೀಡಿದರು. ಇದಕ್ಕೆ ಮೇಯರ್‌ ರಾಮಣ್ಣ ಬಡಿಗೇರ ಒಪ್ಪಿಗೆ ಸೂಚಿಸಿದರು.