ಸಾರಾಂಶ
ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷವಾದ್ದರಿಂದ ಎಂದಿಗೂ ಪಕ್ಷದಲ್ಲಿ ವ್ಯತ್ಯಾಸ ಆಗುವುದಿಲ್ಲ. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ವೈಚಾರಿಕ ನೆಲೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಉಸ್ತುವಾರಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಕರೆ ನೀಡಿದರು.
ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಸಂಘಟನೆಗೆ ಶಕ್ತಿ ಸಿಗುವ ರೀತಿ ಜಿಲ್ಲಾಧ್ಯಕ್ಷರ ಆಯ್ಕೆ ಚಟುವಟಿಕೆಯನ್ನು ಇಡೀ ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸುತ್ತಿದ್ದಾರೆ. ಹಿಂದೆ ಸದಸ್ಯತ್ವ ನೊಂದಾಯಿಸಿ ನಂತರ ಬೂತ್ ಅಧ್ಯಕ್ಷ, ಮಂಡಲ ಅಧ್ಯಕ್ಷ ನಂತರ ಜಿಲಾಧ್ಯಕ್ಷ, ರಾಜ್ಯ ನಂತರ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಒಟ್ಟು ಪರಿಸ್ಥಿತಿಗನುಗುಣವಾಗಿ ಯೋಚಿಸಿ ಮೇಲ್ಮಟ್ಟದಿಂದಲೇ ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಆರಂಭಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
ಎಲ್ಲಿಯೂ ಗೊಂದಲಗಳಿಲ್ಲದೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಅದನ್ನು ಸ್ವಾಗತ ಮಾಡಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಅನೇಕ ಸಂಗತಿಗಳು ಒಪ್ಪಿಗೆ ಆಗದಿರಬಹುದು. ಅದನ್ನು ಸಹಿಸಿಕೊಳ್ಳುವ ಶಕ್ತಿ ಕಾರ್ಯಕರ್ತರಿಗಿದೆ ಎಂದು ಹೇಳಿದರು.ಕಾಂಗ್ರೆಸ್‌ನವರು ಬಿಜೆಪಿ ಬಗ್ಗೆ ಬೇರೆ ಬೇರೆ ರೀತಿಯ ಮಾತುಗಳನ್ನು ಆಡುತ್ತಿದ್ದರೆ, ಬಿಜೆಪಿಯಲ್ಲಿರುವ ಕೆಲವರೂ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಅದನ್ನು ಹಿರಿಯರು ಸರಿಪಡಿಸುತ್ತಾರೆ. ಅಂತಹ ನಡವಳಿಕೆ ಸರಿಯಲ್ಲ. ಎಷ್ಟೇ ದೊಡ್ಡವರಾದರೂ ಕೂಡ ಪಕ್ಷದ ರೀತಿ ನೀತಿ, ಶಿಸ್ತಿಗೆ ಅನುಗುಣವಾಗಿ ನಡೆಯುವುದು ಜವಾಬ್ದಾರಿ, ಅದನ್ನು ತಿದ್ದುವ ಕೆಲಸ ರಾಷ್ಟ್ರೀಯ ನಾಯಕರು ಮಾಡುತ್ತಾರೆ. ನಾವ್ಯಾರು ಗೊಂದಲಕ್ಕೆ ಸಿಕ್ಕಿಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆ. ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ, ನಮ್ಮಲ್ಲಿ ಗೊಂದಲಗಳು ಬೇಡ. ನಾವು ಇಟ್ಟಿರುವ ನಂಬಿಕೆ, ವೈಚಾರಿಕ ನೆಲೆಗಟ್ಟನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ತನ್ನ ಸ್ವಂತ ಶಕ್ತಿ ಆಧಾರದಲ್ಲಿ ಪಕ್ಷ ಕಟ್ಟಲಿಲ್ಲ. ವಿದೇಶದಿಂದ ಬಂದ ಎ.ಓ.ಹ್ಯೂಂ ಎಂಬ ವ್ಯಕ್ತಿ ಕಟ್ಟಿದ ಪಕ್ಷವನ್ನು ಧಾರೆ ಎರೆದ, ಅದನ್ನು ಇವರು ಬಳುವಳಿಯಾಗಿ ತೆಗೆದುಕೊಂಡರು. ಇಷ್ಟಾದ ಮೇಲೂ ನಾವೇ ಏನೋ ಈ ದೇಶಕ್ಕಾಗಿ ಕಡಿದು ಕಟ್ಟೆಹಾಕಿದ್ದೇವೆ ಎಂದು ಕಾಂಗ್ರೆಸ್‌ನವರು ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ ಬಳುವಳಿಯಾಗಿ ಬಂದ ಪಕ್ಷವಲ್ಲ. ಬಲಿದಾನಗಳನ್ನು ಮಾಡಿ ಅಸ್ತಿತ್ವಕ್ಕೆ ಬಂದ ಪಕ್ಷವಾಗಿದೆ ಎಂದರು.ಕಾಶ್ಮೀರಕ್ಕಾಗಿ, ದೇಶಕ್ಕಾಗಿ ಬದುಕಿದಂತಹ ಪಕ್ಷ ಬಿಜೆಪಿ, ಪಕ್ಷದ ಮೊದಲ ಹೋರಾಟವೇ ಕಾಶ್ಮೀರ ಉಳುವಿಗಾಗಿ ನಡೆದಿದೆ.ದೇಶ ಮೊದಲು ಎಂದು ಹೇಳಿದ ಪಕ್ಷ ನಮ್ಮದು ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ಚುನಾವಣೆಗೆ ವೀಕ್ಷಕರಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಮಾತನಾಡಿ, ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಇಂದಿನ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ, ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯದ ವರಿಷ್ಠರಿಗೆ ತಲುಪಿಸಲಾಗುವುದು. ನಂತರ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಬೆಳವಾಡಿ ರವೀಂದ್ರ ಉಪಸ್ಥಿತರಿದ್ದರು.