ಸಾರಾಂಶ
ಭರತ, ಭಾಮಹ, ಆನಂದ ವರ್ಧನ, ದಂಡಿ, ವಾಮನ, ಕುಂತಕನಂತೆ, ಕನ್ನಡದ ಕವಿರಾಜಮಾರ್ಗಕಾರ, ಪಂಪ, ನಾಗವರ್ಮ, ಕೇಶಿರಾಜ, ಜಾಯಗೌಂಡನಂತಹ ಪ್ರಾಚೀನ ಮತ್ತು ಮಧ್ಯಕಾಲೀನ ಕಾವ್ಯ ಮೀಮಾಂಸಕರು ತಮ್ಮ ಕೃತಿಗಳಲ್ಲಿ ಮೀಮಾಂಸೆಯ ವಿಭಿನ್ನ ಆಯಾಮಗಳನ್ನು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯ ಕವಿಗಳಿಗೆ ಶಾಸ್ತ್ರ ಕೃತಿಗಳ ರಚನೆಗೆ ಕಾವ್ಯ ಮೀಮಾಂಸೆಯ ರಸಪಾಕವಿದ್ದಂತೆ. ಶಾಸನ ಶಾಸ್ತ್ರ, ಚಂಪೂ ಕಾವ್ಯ, ವಚನ, ಸಾಂಗತ್ಯ, ಷಟ್ಪದಿ ಕಾವ್ಯ ರಚನೆ ಮಾಡಬೇಕಾದರೆ ಛಂದಸ್ಸಿನಂತೆ ಅಲಂಕಾರ ಮೀಮಾಂಸೆಯು ಪ್ರಧಾನ ಪಾತ್ರ ವಹಿಸುತ್ತದೆ ಎಂದು ಕನ್ನಡ ಪ್ರಾಧ್ಯಾಪಕ ಡಾ. ಹೊಂಬಯ್ಯ ತಿಳಿಸಿದರು.ನಗರದ ಭಾರತೀಯ ಭಾಷಾ ಸಂಸ್ಥಾನವು ಆಯೋಜಿಸಿದ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನದ ಮೊದಲ ಪ್ರಬಂಧ ಗೋಷ್ಠಿಯಲ್ಲಿ ಕಾವ್ಯಾವಲೋಕನ ಮತ್ತು ಕುವಲಾಯನಂದ ಕೃತಿಗಳಲ್ಲಿ ಕಾವ್ಯ ಮೀಮಾಂಸೆಯ ಒಳನೋಟಗಳು ಕುರಿತು ಪ್ರಬಂಧ ಮಂಡಿಸಿದ ಅವರು, ಭಾರತೀಯ ಕಾವ್ಯ ಮೀಮಾಂಸೆಗೆ ಪ್ರಾಚೀನ ಇತಿಹಾಸವಿದೆ. ಸಂಸ್ಕೃತ ಮತ್ತು ಪ್ರಾಕೃತ ಸಾಹಿತ್ಯದಲ್ಲಿ ಕಾವ್ಯ ಮೀಮಾಂಸೆಯ ಚಿಂತನೆಗಳು ಇರುವಂತೆ ಕನ್ನಡ ಕಾವ್ಯ ಲೋಕದಲ್ಲಿ ಮೀಮಾಂಸೆಯ ಒಳನೋಟಗಳು ಇವೆ ಎಂದರು.
ಭರತ, ಭಾಮಹ, ಆನಂದ ವರ್ಧನ, ದಂಡಿ, ವಾಮನ, ಕುಂತಕನಂತೆ, ಕನ್ನಡದ ಕವಿರಾಜಮಾರ್ಗಕಾರ, ಪಂಪ, ನಾಗವರ್ಮ, ಕೇಶಿರಾಜ, ಜಾಯಗೌಂಡನಂತಹ ಪ್ರಾಚೀನ ಮತ್ತು ಮಧ್ಯಕಾಲೀನ ಕಾವ್ಯ ಮೀಮಾಂಸಕರು ತಮ್ಮ ಕೃತಿಗಳಲ್ಲಿ ಮೀಮಾಂಸೆಯ ವಿಭಿನ್ನ ಆಯಾಮಗಳನ್ನು ತಿಳಿಸಿದ್ದಾರೆ ಎಂದು ಅವರು ಹೇಳಿದರು.ಎರಡನೇ ನಾಗವರ್ಮನ ಕಾವ್ಯಾವಲೋಕನ ಮೀಮಾಂಸೆಯ ಕೃತಿಯು ತನ್ನದೇ ಆದ 5 ಅಧ್ಯಾಯಗಳಲ್ಲಿ ಕಾವ್ಯ ಮೀಮಾಂಸೆ ವಿಚಾರಗಳನ್ನು ಚರ್ಚಿಸಿದ್ದಾರೆ. ಇದು ಕವಿಗಳಿಗೆ ಕೈಗನ್ನಡಿ ಇದ್ದಂತೆ. ಶಬ್ಧ ಸ್ಮೃತಿ, ಕಾವ್ಯ ದೋಷ ವಿವರಣೆ, ಗುಣ ವಿವೇಚನೆ, ರಸ ಮತ್ತು ರೀತಿ ನಿರೂಪಣೆ, ಕವಿಸಮಯ ಎಂಬ ಪ್ರಕಾರಗಳಲ್ಲಿ ರಸ ಧ್ವನಿ ಹಾಗೂ ವಿವಿಧ ಆಲಂಕಾರಿಕ ಅಂಶಗಳನ್ನು ಬಹಳ ಭಿನ್ನವಾಗಿ ತನ್ನ ಕೃತಿಯಲ್ಲಿ ಚಿಂತಿಸಿದ್ದಾರೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಶಿವರಾಮ ಶೆಟ್ಟಿ, ಬೆಂಗಳೂರು ವಿವಿಯ ಅಶೋಕ್‌ಬಾಬು ಅವರು ವಿವಿಧ ಪ್ರಬಂಧಗಳನ್ನು ಮಂಡಿಸಿದರು. ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎನ್.ಎಂ. ತಳವಾರ್‌ಅಧ್ಯಕ್ಷತೆ ವಹಿಸಿದ್ದರು. ಡಾ. ಮಾಲಿನಿ ಅಭ್ಯಂಕರ್‌ನಿರೂಪಿಸಿದರು.ಶಾಸ್ತ್ರೀಯ ಕೃತಿಗಳಿಂದ ಕನ್ನಡದ ಸೊಬಗು ಹೆಚ್ಚಿದೆ. ಸಂಶೋಧಕರು ನಿರಂತರವಾದ ಓದು, ಅಧ್ಯಯನ ಚಿಂತನೆಯ ಮೂಲಕ ಅತ್ಯುತ್ತಮವಾದ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಬೇಕು. ಜೊತೆಗೆ ಸಂಶೋಧನಾ ಸಿದ್ಧಪಡಿಸುವಾಗ ಮೂಲ ಆಕರಗಳ ಪರಾಮರ್ಶನ ಗ್ರಂಥಗಳ ಅವಲೋಕನ ಮಾಡಬೇಕು.- ಪ್ರೊ. ನೀಲಗಿರಿ ಎಂ. ತಳವಾರ್, ಸಾಹಿತಿ