ಕೈ ಸರ್ಕಾರ ಇರೋವರೆಗೆ ಪಂಚ ಗ್ಯಾರಂಟಿ ಇರುತ್ತೇ

| Published : Jul 23 2025, 04:20 AM IST

ಕೈ ಸರ್ಕಾರ ಇರೋವರೆಗೆ ಪಂಚ ಗ್ಯಾರಂಟಿ ಇರುತ್ತೇ
Share this Article
  • FB
  • TW
  • Linkdin
  • Email

ಸಾರಾಂಶ

ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಸರ್ಕಾರ ಇರೋ ತನಕ ಮುಂದುವರಿಯುತ್ತವೆ. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಸರ್ಕಾರ ಇರೋ ತನಕ ಮುಂದುವರಿಯುತ್ತವೆ. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಚ ಗ್ಯಾರಂಟಿಗಳು ರಾಜ್ಯದಲ್ಲಿ ಶೇ.೯೯ ರಷ್ಟು ಯಶಸ್ವಿಯಾಗಿವೆ. ತಾಲೂಕಿನಲ್ಲಿ ೬೧೨೧೦ ಮಂದಿ ಗೃಹಲಕ್ಷ್ಮೀ ಯೋಜನೆಯಡಿ ಹಣ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಲ್ಲಿ ೬೦೪೮೯ ಮನೆಗಳಲ್ಲಿ ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ ೩ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ಅನ್ನ ಭಾಗ್ಯ ಯೋಜನೆಯಡಿ ಹಣದ ಬಲು ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ. ಐದು ಕೆಜಿ ಅಕ್ಕಿಯ ಬದಲು ಇನ್ನಿತರ ಪದಾರ್ಥ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಸರ್ಕಾರದ ಚಿಂತನೆ ಸರಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ತಲುಪದ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು,

ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳ ಜನರಲ್ಲಿ ಉತ್ತಮ ಅಭಿಪ್ರಾಯ ಕೂಡವಿದೆ ಜೊತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.

ಜಿಲ್ಲೆಯ ಬದನಗುಪ್ಪೆ ಬಳಿ ಕೈಗಾರಿಕೆಗಳು ಆರಂಭವಾಗುತ್ತಿವೆ ಆಸಕ್ತ ಯುವಕರು ಕೈಗಾರಿಕೆಗಳಲ್ಲಿ ಕೆಲಸ ಮಾಡಬೇಕು, ಯುವ ನಿಧಿ ಒಂದೆರಡು ವರ್ಷ ಸಿಗುತ್ತೇ? ಹಾಗಾಗಿ ಅವಕಾಶ ಸಿಕ್ಕ ಕಡೆ ಕೆಲಸಕ್ಕೆ ತೆರಳಿ ಎಂದರು. ಗಿರಿಜನ ಮಹಿಳೆ ದೇವಮ್ಮ ಮಾತನಾಡಿ, ಸರ್ಕಾರ ೧೦೦, ೨೦೦ ರು. ಕೊಡ್ತಿಲ್ಲ, ೨ ಸಾವಿರ ಕೊಡ್ತಾವ್ರೆ ದೇವ್ರು ಅವ್ರ ಮಕ್ಳಿಗೆ ಒಳ್ಳೆದು ಮಾಡ್ಲಿ ಎಂದರು.

ಕುಂದಕೆರೆ ಗ್ರಾಮದ ಮಂಜುಳ ಮಾತನಾಡಿ, ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿಗಳಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಕಾಂಗ್ರೆಸ್‌ ಅವಕಾಶ ಮಾಡಿಕೊಟ್ಟಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌,ಜಿಪಂ ಸಿಇಒ ಮೋನಾ ರೋತ್‌,ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾಪತಿ,ಚಾ.ನಗರ ಅಧ್ಯಕ್ಷ ನಲ್ಲೂರು ಸೋಮೇಶ್ವರ,ಕೊಳ್ಳೇಗಾಲ ಅಧ್ಯಕ್ಷ ರಾಜೇಂದ್ರ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಕಬ್ಬಹಳ್ಳಿದೀಪು,ಎಸ್‌ಆರ್‌ಎಸ್‌ ರಾಜಶೇಖರ್‌,ರವಿ,ಸಿದ್ದರಾಜು,ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು,ಮಾಜಿ ಅಧ್ಯಕ್ಷ ಪಿ.ಮಹದೇವಪ್ಪ,ತಾಪಂ ಕಾರ್ಯ ನಿರ್ವಾಹಕ ಷಣ್ಮುಗಂ,ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು,ಪಿಡಿಒ ಮಹದೇವಸ್ವಾಮಿ ಇದ್ದರು.

ಸಂವಾದದಲ್ಲಿ ಸಮಸ್ಯೆಗಳದ್ದೇ ಮಾತು: ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ, ಸಂವಾದದಲ್ಲಿ ಮಹಿಳೆಯರು ಮನೆ, ನಿವೇಶನ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆಗಳನ್ನು ಹೇಳಿಕೊಂಡರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ₹೫೦ ಕೋಟಿ ಅನುದಾನ ನೀಡಿದೆ. ಆ ಅನುದಾನದಲ್ಲಿ ಚರಂಡಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇನ್ನೂಳಿದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು.

ಕಣ್ಣೀರು ಹಾಕಿದ ಮಹಿಳೆ: ತೆರಕಣಾಂಬಿ ಗ್ರಾಮದ ಮಹಿಳೆಯೊಬ್ಬರು ಮಾತನಾಡಿ, ನನಗೆ ಮನೆ, ರೇಷನ್‌ ಕಾರ್ಡಿಲ್ಲ, ಗೃಹ ಲಕ್ಷ್ಮೀ ಹಣ ಬರುತ್ತಿಲ್ಲ ಎಂದು ಕಣ್ಣೀರು ಸುರಿಸಿದರು.

ಆಗ ಶಾಸಕರು ಕಾರ್ಡ್‌ ಕೊಡಲು ಇರುವ ಅಡ್ಡಿಯೇನು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ೨೦೨೧ ರಿಂದಲೂ ಹೊಸ ಕಾರ್ಡ್‌ ನೀಡುತ್ತಿಲ್ಲ. ಮುಂದೆ ಕೊಡುತ್ತೇನೆ ಎಂದು ಹೇಳಿದರು.

ಮಹಿಳೆ ಕಣ್ಣೀರು ಹಾಕಿದ್ದನ್ನು ಕಂಡು ಮದ್ಯ ಪ್ರವೇಶಿಸಿದ ಜಿಪಂ ಸಿಇಒ ಮೋನಾ ರೋತ್‌, ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಮೊದಲು ಮಹಿಳೆಯ ಮಾಹಿತಿ ಪಡೆಯಿರಿ. ಏನು ಮಾಡಬೇಕು ನೋಡೋಣ ಆ ಮಾಹಿತಿ ನನಗೆ ಕಳುಹಿಸಿ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡರು.