ಸಾರಾಂಶ
ಬಿಹಾರ ಮೂಲದ ದುರುಳನಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾಗಿದ್ದ ಬಾಲಕಿ ಹಾಗೂ ಪಿಯು ಕಲಾವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ನಾಗವೇಣಿ ರಾಯಚೂರ ಕುಟುಂಬಕ್ಕೂ ಶಾಸಕ ಮಹೇಶ ಟೆಂಗಿನಕಾಯಿ ಕೊಟ್ಟ ಮಾತಿನಂತೆ ಮನೆ ವಿತರಿಸಿದ್ದಾರೆ.
ಹುಬ್ಬಳ್ಳಿ:
ಐದು ವರ್ಷದ ಬಾಲಕಿಯ ಹತ್ಯೆಯಿಂದ ಕಂಗೆಟ್ಟಿದ್ದ ಬಡ ಕುಟುಂಬಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಆಶ್ರಯ ಯೋಜನೆಯಡಿ ಮನೆ ನೀಡಿದ್ದಾರೆ. ಈ ಮೂಲಕ ತಾವೂ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಪಿಯುಸಿಯಲ್ಲಿ ರ್‍ಯಾಂಕ್ ಪಡೆದಿದ್ದ ವಿದ್ಯಾರ್ಥಿನಿ ಕುಟುಂಬಕ್ಕೂ ಮನೆ ನೀಡಿದ್ದಾರೆ.ಇಲ್ಲಿನ ವಿಶ್ವೇಶ್ವರನಗರದ ಸಬ್‌ಜೈಲ್ ಬಳಿಯಿರುವ ಲತಾ ಕುರಿ ಎಂಬುವವರ 5 ವರ್ಷದ ಪುತ್ರಿಯನ್ನು ಬಿಹಾರ ಮೂಲದ ದುರುಳನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆ ಮಾಡಿದ್ದ. ಆಗ ಶಾಸಕ ಟೆಂಗಿನಕಾಯಿ ಮನೆಗೆ ಭೇಟಿ ನೀಡಿ ಆ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಇಲ್ಲಿನ ಕಲ್ಲೂರು ಪ್ಲಾಟ್‌ನಲ್ಲಿ ಸ್ಮಾಟ್‌ಸಿಟಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಆಶ್ರಯ ಮನೆ ವಿತರಿಸಿದ್ದಾರೆ.
ರ್‍ಯಾಂಕ್ ಪಡೆದ ವಿದ್ಯಾರ್ಥಿನಿಗೂ ಮನೆ:ಇನ್ನು ಗೋಪನಕೊಪ್ಪ ಸರ್ಕಾರಿ ಕಾಲೇಜ್‌ನ ಪಿಯು ಕಲಾವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ನಾಗವೇಣಿ ರಾಯಚೂರ ಕುಟುಂಬಕ್ಕೂ ಆಶ್ರಯ ಯೋಜನೆಯಡಿ ಮನೆ ವಿತರಿಸಲಾಗಿದೆ. ಇವರ ಕುಟುಂಬ ಇಲ್ಲಿನ ಪತ್ರಕರ್ತರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಈ ಇಬ್ಬರಿಗೂ ಮನೆ ನೀಡುವುದಾಗಿ ಶಾಸಕರು ಮಾತು ಕೊಟ್ಟಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಮನೆ ವಿತರಣೆ ವೇಳೆ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ರಘು ಧಾರವಾಡಕರ, ಪ್ರಶಾಂತ ಜಾದವ ಸೇರಿದಂತೆ ಫಲಾನುಭವಿಗಳ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.