ಸಾರಾಂಶ
ಗದಗ: ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ವಿಷಯದಲ್ಲಿ ಸರ್ಕಾರ ಬದಲಾದಂತೆ ಕೆಲವರ ಧ್ವನಿಯೂ ಬದಲಾಗಿದೆ. ಸಮಾಜ ಮತ್ತು ರಾಜಕಾರಣ ಎನ್ನುವ ಆಯ್ಕೆ ಬಂದಲ್ಲಿ ನಾನು ಸಮಾಜವನ್ನು ಒಪ್ಪಿಕೊಳ್ಳುತ್ತೇನೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.ಭಾನುವಾರ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವನಾಗಿ ಸಮಾಜ ಮತ್ತು ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದೆ. ಸಮಾಜದ ಪ್ರತಿನಿಧಿಯಾಗಿ ಬಸವಜಯ ಮೃತ್ಯುಂಜಯ ಶ್ರೀಗಳ ಪಾದಯಾತ್ರೆಗೆ ಸಹಕಾರ ನೀಡಿದೆ. ಆದರೆ ಸರ್ಕಾರ ಬದಲಾದ ಮೇಲೆ ಕೆಲವರ ಧ್ವನಿ ಬದಲಾಯಿತು.ಜಯಮೃತ್ಯುಂಜಯ ಶ್ರೀಗಳಿಗೆ ಕೂಡಲಸಂಗಮದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ವಿನಯ ಕುಲಕರ್ಣಿ, ರಾಜು ಕಾಗೆ ಸೇರಿದಂತೆ ಸಮಾಜದ ಮುಖಂಡರ ಜತೆ ಚರ್ಚಿಸಿ, ಮಲಪ್ರಭಾ ನದಿ ದಡದಲ್ಲಿ ಹೊಸ ಆಶ್ರಯ ಮಾಡಿಕೊಡಬೇಕು ಎನ್ನುವ ಚಿಂತನೆಯಿದೆ. ಸಮಾಜದ ಮುಖಂಡರ ಸಭೆಯ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಸಾನ್ನಿಧ್ಯ ವಹಿಸಿದ್ದ ಬಸವ ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ಕೂಡಲ ಸಂಗಮದಲ್ಲಿಯೇ ಪಂಚಮಸಾಲಿ ಪೀಠ ಆಗಬೇಕು ಎಂದು ಎಸ್.ಬಿ. ಸಂಕಣ್ಣವರ ನೇತೃತ್ವದಲ್ಲಿ ನಿರ್ಣಯ ಕೈಗೊಂಡಿದ್ದು ಇದೇ ಗದಗ ನೆಲದಲ್ಲಿ. ಸಿ.ಸಿ. ಪಾಟೀಲ, ಶ್ರೀಶೈಲಪ್ಪ ಬಿದರೂರ, ಕಳಕಪ್ಪ ಬಂಡಿ ಈ ತ್ರಿಮೂರ್ತಿಗಳು ಅದಕ್ಕೆ ಸಹಕಾರ ನೀಡಿದರು. ಈಗ ಇದೇ ನೆಲದಲ್ಲಿ ಹೊಸ ಆಶ್ರಯ ಕಲ್ಪಿಸುವ ಚಿಂತನೆ ನಡೆದಿದೆ. ಆ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ನಿರಂತರವಾಗಿದೆ. ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮತ್ತೆ ಅವರ ಮುಂದೆ ಅಗಲಾಚುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವ ಪ್ರತಿನಿಧಿಗಳಿಗೆ ಬೆಂಬಲಿಸುವ ಸಂಬಂಧ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾಜದ ಮನೆ ಮನೆಗೆ ಹೋಗಿ, ಆಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.