ಯಲಬುರ್ಗಾ: ವಿವಿಧ ಬೇಡಿಕೆ ಈಡೇರಿಸಿವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ತಾಲೂಕು ಸಮಿತಿಯ ಆಶಾ ಕಾರ್ಯಕರ್ತೆಯರು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಡಾ. ವಿದ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದು, ಕೋವಿಡ್ ಸೇರಿದಂತೆ ವಿವಿಧ ಆರೋಗ್ಯ ತುರ್ತು ಪರಿಸ್ಥಿತಿಗಳಲ್ಲಿಯೂ ಜನರ ಸೇವೆ ಮಾಡಿದ್ದಾರೆ. ಆದರೆ, ಸರ್ಕಾರ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಗೌರವಧನ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಕಿ ಇರುವ ಪ್ರೋತ್ಸಾಹಧನ ಹಾಗೂ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಿ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷೆ ಶಂಕ್ರಮ್ಮ ಹಳ್ಳಿಕೇರಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಮೇಲೆ ನಿರಂತರವಾಗಿ ಇಲಾಖೆಯ ಬೇರೆ ಬೇರೆ ಕೆಲಸಗಳ ಹೊರೆ ಹಾಕುತ್ತಿದ್ದು, ಅದಕ್ಕೆ ತಕ್ಕ ವೇತನ ಅಥವಾ ಪ್ರೋತ್ಸಾಹಧನ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಅನುದಾನವಿಲ್ಲದ ೯ ಚಟುವಟಿಕೆಗಳನ್ನು ಆಶಾ ಕಾರ್ಯಕರ್ತೆಯರ ಮೇಲೆ ಹೇರಿರುವುದು ಖಂಡನೀಯ. ಸರ್ಕಾರ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ತಿಪ್ಪಮ್ಮ, ಮಹಾದೇವಿ, ಸುನಂದಾ, ಶೋಭಾ, ಸಕ್ರವ್ವ, ರೇಖಾ, ನಾಗಮ್ಮ, ರಾಜೇಶ್ವರಿ, ಅನ್ನಪೂರ್ಣ, ಶಿವಮ್ಮ, ದೇವಕ್ಕ, ಲತಾ, ಗೀತಾ, ಅಕ್ಕಮಹಾದೇವಿ, ಲಕ್ಷ್ಮಿ, ವಿಜಯಲಕ್ಷ್ಮೀ, ಶಶಿಕಲಾ, ಕರಿಯಮ್ಮ, ಅಲಿಮಾ, ಶಾಂತಮ್ಮ,ಶಕುಂತಲಾ, ಶರಣಮ್ಮ, ಪದ್ಮಾವತಿ, ನೀಲವ್ವ, ಲಕ್ಷ್ಮೀದೇವಿ ಸೇರಿದಂತೆ ನೂರಾರು ಆಶಾ

ಕಾರ್ಯಕರ್ತೆಯರು ಭಾಗವಹಿಸಿದ್ದರು.