ನರಸಿಂಹರಾಜಪುರಸಮಾಜದ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯ ಸಹ ಕಾಪಾಡಿಕೊಳ್ಳಬೇಕು ಎಂದು ಜೇಸಿ ವಲಯ 14 ರ ವಲಯ ಕಾರ್ಯದರ್ಶಿ ಶೃತಿ ರೋಹಿತ್ ಸಲಹೆ ನೀಡಿದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಆಶಾ ಕಾರ್ಯಕರ್ತೆಯರಿಗೆ ಕುಡಿವ ನೀರಿನ ಸ್ಟೀಲ್ ಬಾಟಲ್ ವಿತರಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸಮಾಜದ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯ ಸಹ ಕಾಪಾಡಿಕೊಳ್ಳಬೇಕು ಎಂದು ಜೇಸಿ ವಲಯ 14 ರ ವಲಯ ಕಾರ್ಯದರ್ಶಿ ಶೃತಿ ರೋಹಿತ್ ಸಲಹೆ ನೀಡಿದರು.

ಮಂಗಳವಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮದಲ್ಲಿ ಮಹಿಳೆಯರ ಸಬಲೀಕರಣ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಕೇವಲ ಗೌರವ ಧನ ಮಾತ್ರ ಪಡೆಯುವ ಆಶಾ ಕಾರ್ಯಕರ್ತೆಯರು ವಾರ್ಡುಗಳಲ್ಲಿ, ಗ್ರಾಮಗಳಲ್ಲಿ ಸುತ್ತಾಡಿ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ವಿಚಾರಿಸುತ್ತಾರೆ. ಈ ಒತ್ತಡದ ಕೆಲಸದ ನಡುವೆ ಅವರಿಗೆ ತಮ್ಮ ಆರೋಗ್ಯ ನೋಡಿಕೊಳ್ಳಲು ಸಹ ಸಮಯ ಸಿಗುವುದಿಲ್ಲ. ಆಶಾ ಕಾರ್ಯಕರ್ತೆಯರು ನಿಸ್ವಾರ್ಥದಿಂದ ಸೇವೆ ಮಾಡುತ್ತಾರೆ. ತಾಯಿ ಗರ್ಭದಿಂದ ಬಂದ ಕ್ಷಣ ದಿಂದಲೇ ಹೆಣ್ಣು ಸೇವೆಗೆ ಸಿದ್ಧಳಾಗುತ್ತಾಳೆ. ಮಹಿಳೆಯರು ಮಾನಸಿಕ ಒತ್ತಡದಿಂದ ಹೊರ ಬಂದು ತಮ್ಮ ಜೀವನ ರೂಪಿಸಿಕೊಳ್ಳಬೇಕು. ಅತಿಯಾಗಿ ಆಸೆ ಪಡೆಯದೆ ಇದ್ದುದರಲ್ಲೇ ತೃಪ್ತಿಯಿಂದ, ಸಂತೋಷದಿಂದ ಸಂಸಾರ ಮುನ್ನಡೆಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತ ಉದ್ಘಾಟಿಸಿ ಮಾತನಾಡಿ ನಮ್ಮ ಆಹಾರದ ವ್ಯತ್ಯಾಸ ದಿಂದ ಇತ್ತೀಚಿಗೆ ದಿನಗಳಲ್ಲಿ ಖಾಯಿಲೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯಿಂದ ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿ ಹಲವಾರು ಕಾರ್ಯಕ್ರಮ ರೂಪಿಸುತ್ತಿದ್ದೇವೆ.14 ವರ್ಷ ತುಂಬಿದ ಬಾಲಕಿಯರಿಗೆ ಗರ್ಭ ಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್.ಪಿ.ವಿ ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲಾಧ್ಯಂತ ಹಮ್ಮಿಕೊಂಡಿದ್ದೇವೆ ಎಂದರು.

ಜೇಸಿ ವಲಯ 14 ರ ಸಮುದಾಯ ಅಭಿವೃದ್ಧಿ ಅಧಿಕಾರಿ ಕೆ.ಎ.ಸುಜನ್ ಕುಡಿವ ನೀರಿನ ಸ್ಟೀಲ್ ಬಾಟಲ್ ಯೋಜನೆ ಬಗ್ಗೆ ಮಾಹಿತಿ ನೀಡಿ, ಸ್ಟೀಲ್ ಬಾಟಲ್ ನೀಡುವ ಕಾರ್ಯಕ್ರಮ ಜೇಸಿ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮವಾಗಿದೆ. ಒಟ್ಟು 29 ವಲಯಗಳಾಗಿ ವಿಂಗಡಿಸಲಾಗಿದೆ.ಇದರಲ್ಲಿ 1200 ಜೇಸಿ ಘಟಕಗಳಿವೆ. ಈಗಾಗಲೇ ದೇಶದಲ್ಲಿ 22 ಸಾವಿರ ಕುಡಿಯುವ ನೀರಿನ ಸ್ಟೀಲ್ ಬಾಟಲ್ ವಿತರಿಸಲಾಗಿದೆ. ವಲಯ 14 ರಲ್ಲಿ ಈಗಾಗಲೇ 1700 ಕುಡಿಯುವ ನೀರಿನ ಸ್ಟೀಲ್ ಬಾಟಲ್ ವಿತರಿಸಿದ್ದೇವೆ. ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಲೋಟಗಳು ಆರೋಗ್ಯಕ್ಕೆ ಹಾನಿಕರ ಎಂದು ಈಗಾಗಲೇ ಸಾಬೀತಾಗಿದೆ ಎಂದರು.

ಇದೇ ಸಂದರ್ಭದಲ್ಲಿ 42 ಆಶಾ ಕಾರ್ಯಕರ್ತೆಯರಿಗೆ ಹಾಗೂ ಆಸ್ಪತ್ರೆ 13 ಸ್ವಚ್ಛತಾ ಸಿಬ್ಬಂದಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್ ವಿತರಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ ಗೌಡ ವಹಿಸಿದ್ದರು. ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಕ್ಷಮ, ಜೇಸಿ ಕಾರ್ಯದರ್ಶಿ ರಜತ್ ವಗಡೆ ಇದ್ದರು. ಜೋಯಿ ಬ್ರೋ ಜೇಸಿ ವಾಣಿ ವಾಚಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಸ್ವಾಗತಿಸಿದರು.