ಸಾರಾಂಶ
ಆಷಾಢ ಶುಕ್ರವಾರದ ಪ್ರಯುಕ್ತ ಜಿಲ್ಲಾ ಕೇಂದ್ರ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿರುವ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಮಯೂರಿ ವಿಶ್ವರೂಪಿಣಿ ಅಲಂಕಾರ ಮಾಡಿರುವುದು,
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೊದಲ ಆಷಾಢ ಶುಕ್ರವಾರ ಪ್ರಯುಕ್ತ ದೇವಸ್ಥಾನಗಳಿಗೆ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ನೆರವೇರಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.ಜಿಲ್ಲಾ ಕೇಂದ್ರ ಚಾಮರಾಜೇಶ್ವರ ದೇವಸ್ಥಾನದಲ್ಲಿರುವ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಮಹಿಳೆಯರು, ಯುವತಿಯರು ತಂಡೋಪತಂಡವಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಚಾಮುಂಡೇಶ್ವರಿಗೆ ಪ್ರಿಯವಾದ ನಿಂಬೆ ಹಣ್ಣಿನ ಹೋಳಿನ ದೀಪ ಹಚ್ಚಿ, ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಿದರು, ಮಹಿಳೆಯರು ಪರಸ್ಪರ ಮಾಂಗಲ್ಯ ಪೂಜೆ ನೆರವೇರಿಸಿಕೊಂಡು, ಅರಿಶಿನ, ಕುಂಕುಮ, ಫಲ ತಾಂಬೂಲ ಹಂಚಿಕೊಂಡರು,ಆಗಮಿಕರಾದ ನಾಗರಾಜ್ ದೀಕ್ಷಿತ್, ಚಾಮುಂಡೇಶ್ವರಿ ತಾಯಿಯನ್ನು ಚಿನ್ನ ಲೇಪಿತ ಕವಚ ತೊಡಿಸಿ ಮಯೂರಿ ವಿಶ್ವರೂಪಿಣಿ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಗಮಿಕರಾದ ನಾಗರಾಜ್ ದೀಕ್ಷಿತ್, ದೇವಿಗೆ ಆಷಾಢ ಮಾಸ ವಿಶೇಷವಾದದ್ದು, ಈ ಸಮಯದಲ್ಲಿ ದೇವಿಯನ್ನು ಪೂಜಿಸಿದರೆ, ಸರ್ವ ಕಾರ್ಯಗಳು ನೆರವೇರುತ್ತವೆ, ಅದರಲ್ಲೂ ಮದುವೆಯಾಗದವರಿಗೆ ಮದುವೆ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯೆಯ ಸೌಭಾಗ್ಯ ದೊರೆಯುತ್ತದೆ ಎಂದರು.