ಆಶಾಢ ಉತ್ಸವ: ವಿಠ್ಠಲ, ರುಕ್ಮಿಣಿ ಭವ್ಯ ರಥೋತ್ಸವ

| Published : Jul 22 2024, 01:18 AM IST

ಸಾರಾಂಶ

ಆಷಾಢ ಉತ್ಸವದ ಪರಂಪರೆಯ ಭಾಗವಾಗಿ ಪ್ರತಿವರ್ಷ ನಡೆಯುವ ಉತ್ಸವದ ಅಂಗವಾಗಿ ಎಳೆಯಲ್ಪಡುವ ರಥೋತ್ಸವಕ್ಕೆ ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ಶ್ರೀಪಾದರು ಮಂಗಳಾರತಿ ಮಾಡುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭೆ ವಾರ್ತೆ ಕಲಬುರಗಿ

ಇಲ್ಲಿನ ಬ್ರಹ್ಮಪೂರ ಬಡಾವಣೆಯಲ್ಲಿರುವ ಶತಮಾನಗಳ ಇತಿಹಾಸವಿರುವ ದೇಶಮುಖ ವಾಢಾದಲ್ಲಿ ವಿಠ್ಠಲ- ರುಕ್ಮಿಣಿ ದೇವರ ಭವ್ಯ ರಥೋತ್ಸವ ವೈಭವದಿಂದ ನಡೆಯಿತು.

ಆಷಾಢ ಉತ್ಸವದ ಪರಂಪರೆಯ ಭಾಗವಾಗಿ ಪ್ರತಿವರ್ಷ ನಡೆಯುವ ಉತ್ಸವದ ಅಂಗವಾಗಿ ಎಳೆಯಲ್ಪಡುವ ರಥೋತ್ಸವಕ್ಕೆ ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ಶ್ರೀಪಾದರು ಮಂಗಳಾರತಿ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ನಡೆದ ರಥೋತ್ಸವ ದೇಶಮುಖ ವಾಢಾದಿಂದ ಮುಖ್ಯರಸ್ತೆಯಲ್ಲಿ ಲಾಲಗೇರಿ ಕ್ರಾಸ್‌ ವರೆಗೂ ಸಾಗಿ ನಂತರ ಅಲ್ಲಿಂದ ಮತ್ತೆ ಮೂಲಸ್ಥಾನ ಸೇರಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಮಹಿಳೆಯರು ಭಜನಾದಿಗಳನ್ನು ಮಾಡಿದರೆ, ಪುರುಷರು ತಾಳ ಹಾಕುತ್ತ, ಪುಡಗಡಿ ಆಡುತ್ತ, ವಿಶೇಷವಾಗಿ ಕುಣಿತ ಪ್ರದರ್ಶನ ಮಾಡುತ್ತ ಗಮನ ಸೆಳೆದರು.

ದೇಶಮುಖ ಪರಿವಾರದ ದೇವರಾವ ದೇಶಮುಖ, ಪಾಂಡುರಂಗ ದೇಶಮುಖ, ಅಭಿಜೀತ್‌ ದೇಶಮುಖ, ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ ಸೇರಿದಂತೆ ಅನೇಕರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ರಥೋತ್ಸವದ ದಾರಿಯುದ್ದಕ್ಕೂ ಮಣ್ಣಿನ ಬೊಂಬೆಗಳ ವ್ಯಾಪಾರ ಭರ್ಜರಿಯಾಗಿತ್ತು. ಕುಂಬಾರರು, ಬೊಂಬೆ ತಯಾರಿಸಿಕೊಂಡು ಬಣ್ಣ ಬಳಿದು ಮಾರಲು ತಂದಿರುತ್ತಾರೆ. ರಥೋತ್ಸವ ಸೇವೆಗೆ ಬಂದ ಭಕ್ತರೆಲ್ಲರೂ ಮಕ್ಕಳಿಗೆ ಆಡಲು ಈ ಬೊಂಬೆಗಳನ್ನು ಖರೀದಿಸುತ್ತಾರೆ.

ರಥೋತ್ಸವದ 3ರಿಂದ 4 ಗಂಟೆಯಲ್ಲೇ ಬಣ್ಣದ ಬೊಂಬೆಗಳಲ್ಲೆ ಮಾರಾಟವಾಗಿ ಬಿಡುತ್ತದೆ. ಆಶಾಢ ರಥೋತ್ಸವ ಕುಂಬಾರರಿಗೆ ಬದುಕಿನ ಬುತ್ತಿ ಕಟ್ಟಿಕೊಳ್ಳಲು ನೆರವಾಗುತ್ತದೆ.