ಸಾರಾಂಶ
ಅಶೋಕ್ ಬಂಗೇರ ಅವರ ದೈವ ನರ್ತನದ ಕೊನೇ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ಮುಖ್ಯ ಪಾತ್ರಿಯಾಗಿದ್ದರು.
ಮಂಗಳೂರು: ದೈವ ನರ್ತಕರೊಬ್ಬರು ದೈವನರ್ತನ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಮಂಗಳೂರಿನ ಪ್ರಸಿದ್ಧ ದೈವ ನರ್ತಕ ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ (೪೭) ಸಾವನ್ನಪ್ಪಿದವರು. ಶುಕ್ರವಾರ ರಾತ್ರಿ ಹಳೆಯಂಗಡಿ ಸಮೀಪ ರಕೇಶ್ವರಿ ದೈವದ ಕೋಲ ನಡೆಯುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.ಕೋಲ ಕೊನೇ ಘಟ್ಟದಲ್ಲಿದ್ದಾಗ ಎದೆನೋವು ಉಂಟಾಗಿದ್ದು, ಕೂಡಲೇ ವೇಷ ಕಳಚಿಟ್ಟು ಕೋಲವನ್ನು ಸಹೋದರ ನಿರ್ವಹಿಸುತ್ತಾನೆಂದು ಹೇಳಿ ತುರ್ತಾಗಿ ಅಶೋಕ್ ಬಂಗೇರ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಗೆ ಹೋಗುತ್ತಿದ್ದಂತೆ ಹೃದಯಾಘಾತಗೊಂಡಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.
ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ರಕೇಶ್ವರಿ ದೈವದ ಕೋಲ ನಡೆದಿತ್ತು. ಅರ್ಧಕ್ಕೆ ನಿಲ್ಲಿಸಿದ್ದರಿಂದ ದೈವದ ಕೋಲವನ್ನು ಅಶೋಕ್ ಬಂಗೇರ ಅವರ ಸಹೋದರ ಪೂರ್ಣಗೊಳಿಸಿದ್ದರು. ಅಶೋಕ್ ಬಂಗೇರ ಅವರ ದೈವ ನರ್ತನದ ಕೊನೇ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ಮುಖ್ಯ ಪಾತ್ರಿಯಾಗಿದ್ದರು.ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರು ಹಾಗೂ ಐವರು ಸಹೋದರರನ್ನು ಅಗಲಿದ್ದಾರೆ.