ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತ

| Published : Jan 28 2024, 01:15 AM IST

ಸಾರಾಂಶ

ಕೋವಿಡ್, ಲಾಕ್‌ಡೌನ್ ಸಂದರ್ಭದಲ್ಲಿ ಭಾರತ ತನ್ನ ಸ್ವ ಸಾಮರ್ಥ್ಯದಿಂದ ಕೋವಿಡ್ ಲಸಿಕೆ ತಯಾರಿಸಿ ಇಡೀ ಜಗತ್ತಿಗೆ ರಫ್ತು ಮಾಡುವ ಮೂಲಕ ಮಾದರಿಯಾಗಿದೆ. ಭಾರತ ಈಗ ಎಲ್ಲ ವಿಭಾಗಗಳಲ್ಲೂ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯುವಲ್ಲಿ ದಾಪುಗಾಲು ಇಡುತ್ತಿದೆ

ಹುಬ್ಬಳ್ಳಿ: ಜಗತ್ತಿನ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಹೊಂದುತ್ತಿದೆ. ಅದಕ್ಕೆ ಪೂರಕವಾಗಿ ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪ್‌ಡೆಟ್ ಆಗುವ ಮೂಲಕ ಸಾಧನೆ ಮಾಡಬೇಕಿದೆ ಎಂದು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ ಹೇಳಿದರು.

ಅವರು ಶನಿವಾರ ಇಲ್ಲಿನ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನ ಡಾ.ಪ್ರಭಾಕರ್ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜಗತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳೂ ಸಹ ತಾಂತ್ರಿಕ ಕ್ಷೇತ್ರಗಳಲ್ಲಿ ದೊರೆಯುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವ ಕಾರ್ಯವಾಗಬೇಕಿದೆ. ಸೌಲಭ್ಯದ ಕೊರತೆ ಸೇರಿದಂತೆ ಅನೇಕ ಕಾರಣಕ್ಕೆ ಭಾರತ ಮೊದಲ ಕೈಗಾರಿಕಾ ಕ್ರಾಂತಿಯಿಂದ ವಂಚಿತವಾಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಏನೇ ಸಮಸ್ಯೆಗಳು ಬಂದರೂ ಅದನ್ನು ಸಮರ್ಥವಾಗಿ ಪರಿಹರಿಸಿಕೊಂಡು ಮುನ್ನುಗ್ಗುವ ಶಕ್ತಿ ಮತ್ತು ಸಾಮರ್ಥ್ಯ ಭಾರತಕ್ಕಿದೆ ಎಂದರು.

ದೇಶಕ್ಕೆ ಕೊಡುಗೆ ನೀಡಿ: ಕೋವಿಡ್, ಲಾಕ್‌ಡೌನ್ ಸಂದರ್ಭದಲ್ಲಿ ಭಾರತ ತನ್ನ ಸ್ವ ಸಾಮರ್ಥ್ಯದಿಂದ ಕೋವಿಡ್ ಲಸಿಕೆ ತಯಾರಿಸಿ ಇಡೀ ಜಗತ್ತಿಗೆ ರಫ್ತು ಮಾಡುವ ಮೂಲಕ ಮಾದರಿಯಾಗಿದೆ. ಭಾರತ ಈಗ ಎಲ್ಲ ವಿಭಾಗಗಳಲ್ಲೂ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯುವಲ್ಲಿ ದಾಪುಗಾಲು ಇಡುತ್ತಿದೆ. ನೂರನೇ ಸ್ವಾತಂತ್ರ ದಿನೋತ್ಸವದ ಹೊತ್ತಿಗೆ ಒಂದನೇ ಸ್ಥಾನಕ್ಕೆ ಬರುವುದು ನಿಶ್ಚಿತವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಬಹಳಷ್ಟು ಅವಕಾಶಗಳಿದ್ದು, ಜಗತ್ತಿಗೆ ಹಾಗೂ ದೇಶಕ್ಕೆ ಏನು ಬೇಕು ಎಂಬುದನ್ನು ಅರಿತುಕೊಂಡು ಆ ದಿಸೆಯಲ್ಲಿ ವಿದ್ಯಾರ್ಥಿಗಳು ಮುನ್ನಡಿ ಇಡಬೇಕು. ಅಂದಾಗ ಮಾತ್ರ ದೇಶಕ್ಕೆ ಏನಾದರೊಂದು ಅತ್ಯುತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.

ಕೆಎಲ್‌ಇ ತಾಂತ್ರಿಕ ವಿವಿಯ ಉಪಕುಲಪತಿ ಪ್ರೊ. ಅಶೋಕ ಶೆಟ್ಟರ್ ಮಾತನಾಡಿ, ಕೆಎಲ್‌ಇ ತಾಂತ್ರಿಕ ವಿವಿಯೂ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವಲ್ಲಿ ಶ್ರಮಿಸುತ್ತಿದೆ. ಕ್ಯಾಂಪಸ್ ಸಂದರ್ಶನದಲ್ಲಿ ನಮ್ಮ ವಿವಿಯ ಶೇ.85 ರಷ್ಟು ವಿದ್ಯಾರ್ಥಿಗಳು ನೇಮಕಾತಿ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸ್ಟಾರ್ಟ್‌ ಅಪ್‌ಗೆ ಅವಕಾಶ: ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿವಿ ಇನ್‌ಕ್ಯೂಬೇಶನ್ ಸೆಂಟರ್ ಹೊಂದಿದ್ದು, ಆ ಮೂಲಕ ಸ್ಟಾರ್ಟ್‌ಅಪ್ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ 145ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯಾರಂಭ ಮಾಡುತ್ತಿವೆ. ಬೆಳಗಾವಿ ವಿವಿಯಲ್ಲಿಯೂ ಹೊಸದಾಗಿ ಇನ್ ಕ್ಯೂಬೇಶನ್ ಸೆಂಟರ್ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಕೆಎಲ್‌ಇ ವಿವಿಯನ್ನು ಬಹು ಅಧ್ಯಯನ ವಿವಿ ಆಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದ ಅವರು, ವಿವಿಯ ವಾರ್ಷಿಕ ಸಾಧನೆಯ ಕುರಿತು ವರದಿ ವಾಚಿಸಿದರು.

ಅದಕ್ಕೂ ಮುನ್ನ ಕೆಎಲ್‌ಇ ತಾಂತ್ರಿಕ ವಿವಿಯ ಕುಲಾಪತಿ ಡಾ.ಪ್ರಭಾಕರ ಕೋರೆ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲೆ ವಿವಿಧ ವಿಭಾಗಗಳ ಡೀನ್, ಮುಖ್ಯಸ್ಥರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

ವಿವಿಧ ಪದವಿ ಪ್ರದಾನ ಕಾರ್ಯಕ್ರಮ: ಕೆಎಲ್‌ಇ ತಾಂತ್ರಿಕ ವಿವಿಯ 5ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ವಿಭಾಗದಲ್ಲಿ 1293 ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 306 ಸೇರಿ ಒಟ್ಟು 1599 ವಿದ್ಯಾರ್ಥಿಗಳಿಗೆ ಪದಕ, ಮೂವರು ಕಾಲೇಜು ಪ್ರಾಧ್ಯಾಪಕರು ಸೇರಿ ಒಟ್ಟು 9 ಜನರಿಗೆ ಪಿ.ಎಚ್.ಡಿ. ಪ್ರದಾನ ಮಾಡಲಾಯಿತು. ಪ್ರಥಮ ರ್ಯಾಂಕ್ ಪಡೆದ 13 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 15 ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕ ವಿಜೇತರು.

ದೀಪಕ ಯರಗುಪ್ಪಿ, ನಮ್ರತಾ ಹೆಗಡೆ, ಝರೀನ್‌ಕೌಸರ್ ಕಾಝಿ, ರೂಪಾ ಕುರಿ, ಉದಯ ಕುಲಕರ್ಣಿ, ನಾಗರಾಜ ಏಕಬೋಟೆ, ಲೀನಾ ಹುಬ್ಲೀಕರ, ಪ್ರವೀಣ ಚಂದರಗಿ ಹಾಗೂ ಅನುಶ್ರೀ ಕಿಣಿ ಅವರ ಸಂಶೋಧನಾ ಪ್ರಬಂಧಕ್ಕೆ ಪಿಎಚ್‌ಡಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವದ ಕೊನೆಯಲ್ಲಿ ರಾಷ್ಟ್ರಗೀತೆ ಮುಗಿದ ಬಳಿಕ ವಿದ್ಯಾರ್ಥಿಗಳು ಜೈ ಶ್ರೀರಾಮ ಘೋಷಣೆ ಕೂಗಿದರು.