ಸಾರಾಂಶ
ಕಾರವಾರ:
ಪರಿಸರ ಸಂಘಟನೆಗಳಿಂದ ಸುಪ್ರೀಂಕೋರ್ಟ್‌ನಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿ ತಿರಸ್ಕೃತವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕು ಎಂದು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ತೀರ್ಪು ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಸಂಬಂಧಿಸಿ ಮರಣ ಶಾಸನವಾಗುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಜರುಗಿದ ಅರಣ್ಯವಾಸಿಗಳ ಸಭೆ ಉದ್ದೇಶಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ೮೫,೫೫೭ ಅರ್ಜಿಗಳು ಸಲ್ಲಿಸಿದ್ದು, ಅವುಗಳಲ್ಲಿ ೬೯,೭೩೩ ಅರ್ಜಿಗಳು ತಿರಸ್ಕೃತವಾಗಿವೆ. ಜಿಲ್ಲೆಯಲ್ಲಿ ಕೇವಲ ೨,೮೫೫ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿರುವುದು ವಿಷಾದಕರ ಸಂಗತಿಯಾಗಿದೆ. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿನ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳು ತಿರಸ್ಕಾರವಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಮಲ್ಲಾಪುರ ಗ್ರಾಪಂ ಅಧ್ಯಕ್ಷ ಉದಯ ಬಾಂದೇಕರ ಮಾತನಾಡಿ, ಅರಣ್ಯ ಭೂಮಿ ಹಕ್ಕಿಗೆ ಹೋರಾಟ ಅನಿವಾರ್ಯವಾಗಿದೆ. ಹಕ್ಕಿಗಾಗಿ ಕಾನೂನಾತ್ಮಕ ಮತ್ತು ಸಾಂಘಿಕ ಹೋರಾಟ ಮಾಡೋಣ ಎಂದು ಕರೆ ನೀಡಿದರು.ಗ್ರಾಪಂ ಉಪಾಧ್ಯಕ್ಷೆ ಪಿ. ಯಾದರ್ ಡಿಸೋಜಾ, ಚಂದ್ರಕಾಂತ ಬಾಂದೇಕರ, ಸಂದೀಪ್ ಶೇಟ್, ಗಫರ್ ಶೇಖ್, ಶಾಂತಾರಾಮ ಹೆಗಡೆ, ಗ್ಯಾಬ್ರಿಯಲ್ ಮಾತನಾಡಿದರು.ಶ್ರೀಕೃಷ್ಣ ಕುಣಬಿ, ಮಹಾಬಲೇಶ್ವರ ಮಲ್ಲಾಪುರ, ಶಾಂತಾ ಟಿ., ಮಂಜುನಾಥ ಕುಣಬಿ, ನಾರಾಯಣ ಎಂ., ವೆಂಕಟ್ರಮಣ ಬಿ, ಇದ್ದರು.
ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ ೩೩ ವರ್ಷದಿಂದ ನಿರಂತರ ಹೋರಾಟ ಮಾಡಲಾಗುತ್ತಿದ್ದು ಭೂಮಿ ಹಕ್ಕು ದೊರಕುವರೆಗೂ ಹೋರಾಟ ನಡೆಯುತ್ತದೆ. ಜಾತಿ, ಮತ, ಪಕ್ಷ, ಧರ್ಮ ಆಧಾರಿತ ಹೋರಾಟವಾಗಿಲ್ಲ ಎಂದು ರವೀಂದ್ರ ನಾಯ್ಕ ತಿಳಿಸಿದರು.