ಬಿಜೆಪಿಯಲ್ಲಿ ಅಶೋಕ್‌ ಮತ್ತು ವಿಜಯೇಂದ್ರ ಅವರನ್ನು ಇಳಿಸಲು ಪೈಪೋಟಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಬಿಜೆಪಿಯಲ್ಲಿ ಅಶೋಕ್‌ ಮತ್ತು ವಿಜಯೇಂದ್ರ ಅವರನ್ನು ಇಳಿಸಲು ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ ಅವರಿಬ್ಬರನ್ನೂ ಇಳಿಸಿದರೆ ನನಗೇನಾದರೂ ಸಿಗಬಹುದಾ ಅಂತ ಕುಮಾರಸ್ವಾಮಿ ಕಾಯುತ್ತಿದ್ದಾರೆ. ಚುನಾವಣೆ ಹತ್ತಿರಕ್ಕೆ ಬರಲಿ. ಪ್ಯಾರಾಚೂಟ್‌ ಮೂಲಕ ಬಂದು ಇಳಿಯುತ್ತಾರೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆ ಹತ್ತಿರ ಬರಲಿ ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಯಾವ ಅಧಿಕಾರವೂ ಇರೋದಿಲ್ಲ. ಬೇರೆಯವರು (ಕುಮಾರಸ್ವಾಮಿ) ಪ್ಯಾರಾಚೂಟ್ ಮೂಲಕ ರಾಜ್ಯ ರಾಜಕಾರಣಕ್ಕೆ ಬಂದು ಇಳಿಯುತ್ತಾರೆ. ಅಶೋಕ್, ವಿಜಯೇಂದ್ರ ಅವರ ಕತೆ ಏನಿದ್ದರೂ ಬರೀ ಬುಟ್ಟಿ ಬೇವಿನ ಸೊಪ್ಪು, ನಂದೇ ಬೆಳಗು ಪೂಜಾರಿ ಅನ್ನೋ ತರಹ. ಕುಮಾರಸ್ವಾಮಿ ಇವರಿಬ್ಬರನ್ನು ಇಳಿಸಿ‌ ನನಗೇನಾದರೂ ಸಿಗಬಹುದಾ ಅಂತಾ ನೋಡುತ್ತಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಂಬ್ ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದು ಛೇಡಿಸಿದರು.

ಎಚ್‌ಡಿಕೆ ಅಲ್ಲೋಲ ಕಲ್ಲೋಲ‌ ಬಿಡಿಸಿ ಹೇಳಬೇಕೇ?:

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನನ್ನನ್ನು ಅಧಿಕಾರದಿಂದ ಇಳಿಸಿ ಬಿಡುತ್ತೇನೆ, ದೆಹಲಿಯಿಂದ ಬಾಂಬ್ ಹಾಕಿ ಬಿಡ್ತೇನೆ, ಅಲ್ಲೋಲ‌ ಕಲ್ಲೋಲ ಮಾಡಿ ಬಿಡ್ತೇನೆ ಅಂತ ಮಾತಾಡುತ್ತಿದ್ದಾರೆ. ಅದೇನೋ ಅಲ್ಲೋಲ ಕಲ್ಲೋಲ ಆಗಿದೆಯಲ್ಲ. ಅದನ್ನು ನಾನು ಬಿಡಿಸಿ ಹೇಳಬೇಕೇ? ದಿನವೂ ನಾವು ಟಿವಿಯಲ್ಲಿ ನೋಡುತ್ತಿದ್ದೇವಲ್ಲ ಎಂದರು.

ಆಗ ಸಭಿಕರೊಬ್ಬರು ‘ಪೆನ್ ಡ್ರೈವ್’ ಎಂದು ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ನಮಗೆ ಪೆನ್ ಡ್ರೈವ್ ವಿಚಾರ ಬೇಡ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಸೆಂಟ್ರಲ್ ಜೈಲ್ ವಿಚಾರವೆಲ್ಲ ಅವರವರದ್ದು. ಅದೆಲ್ಲವೂ ಅವರ ಸಿದ್ಧಾಂತ. ಅವರಿಂದ ಯಾರ್ಯಾರ ಕುಟುಂಬ ಏನಾಯಿತು ಎಂದು ಈಗ ಮಾತನಾಡುವುದು ಬೇಡ. ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡಮಂತ್ರಿ ಸ್ಥಾನ ಸಿಕ್ಕಿದೆ. ಹಾಗಿದ್ದಾಗ ಉಳಿದೆಲ್ಲವನ್ನು ಬಿಟ್ಟು ಕರ್ನಾಟಕದ 50,000 ಜನರಿಗೆ ಉದ್ಯೋಗ ಸಿಗುವಂತೆ ಮಾಡಲಿ. ಅವರಿಗೆ ಎಲ್ಲಿ ಬೇಕೋ ಅಲ್ಲಿ, ಮಂಡ್ಯದಲ್ಲೇ ಬೇಕಾದರೂ ಭೂಸ್ವಾಧೀನ ಮಾಡಿ ಕೊಡೋಣ ಎಂದು ಕಟುವಾಗಿ ತಿವಿದರು.

ಸಿಎಂ ಸ್ಥಾನದಲ್ಲಿದ್ದು ದ್ವೇಷ ಬೇಡ ಅಂತ ಸಮ್ಮನಿದ್ದೇನೆ:

ನಮ್ಮನ್ನು ಬೇಕಾದರೆ ಸೀಳಿ ಇಡಿ, ಸಿಬಿಐಗೆ ತೆಗೆದುಕೊಂಡು ಹೋಗಲಿ, ಯಾವ ತನಿಖೆ ಬೇಕಾದರೂ ಮಾಡಲಿ. ಆದರೆ, ಅವರ ವಿರುದ್ಧ ತನಿಖೆ ಮಾಡಿದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರಲಾಗುತ್ತಿದೆ. ನೀವೆಲ್ಲವೂ ಟೀಮ್ ಅಲ್ಲವೇ? ಈ ಸ್ಥಾನದಲ್ಲಿದ್ದುಕೊಂಡು ದ್ವೇಷ ಬೇಡ ಎಂದು ಆ ವಿಚಾರಗಳಿಗೆ ನಾನು ಹೋಗಿಲ್ಲ.‌ ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಆಶಯ. ಈ ಅಧಿಕಾರ ಇರುವುದು ದುರುಪಯೋಗ ಮಾಡಲು ಅಲ್ಲ. ಹತ್ತು ಜನಕ್ಕೆ ಒಳ್ಳೆಯದನ್ನು ಮಾಡಲು ಎಂಬುದು ನನ್ನ ಬದ್ಧತೆ ಎಂದರು.

ಈ ಬಾರಿ 10 ದಿನ ಸದನ ನಡೆಸಲೂ ಬಿಡಲಿಲ್ಲ. ಆನಂತರವೂ ಪಾದಯಾತ್ರೆ ಮಾಡಿದರು. ಈಗ ಕರೆದಿರುವ ಅಧಿವೇಶನದಲ್ಲಿ ಬೇರೆ ವಿಚಾರ ಮಾತನಾಡುವಂತಿಲ್ಲ.‌ ಕೇವಲ ರೈತರ ವಿಚಾರ ಮಾತ್ರ. ಕಸ್ತೂರಿ ರಂಗನ್ ವರದಿ ಜಾರಿಗೆ ತಂದವರು ಯಾರು? ಇದರ ಬಗ್ಗೆ ಚರ್ಚೆ ಮಾಡಲಿ, ಬಿಡಲಿ. ಅದು ಅವರಿಗೆ ಬಿಟ್ಟಿದ್ದು. ನಂತರ ಅವರು ಗದೆಯಾದರೂ ಬೀಸಲಿ, ಬಾಣವನ್ನಾದರೂ ಬಿಡಲಿ. ಇದನ್ನು ಅನುಭವಿಸಲು ನಮ್ಮ ಪಕ್ಷ, ನಾವು ಹಾಗೂ ಕಾರ್ಯಕರ್ತರು ಸಿದ್ಧರಿದ್ದೇವೆ ಎಂದು ತಿಳಿಸಿದರು.