ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಅತ್ಯಂತ ಗೌರವದ ಸ್ಥಾನದಲ್ಲಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸ್ವಾಮೀಜಿ ಹೆಸರಲ್ಲಿ ಜಾತಿ ತರುತ್ತಿದ್ದಾರೆ. ‘ಆರ್ ಅಶೋಕ್ ವಿಪಕ್ಷ ನಾಯಕ ಅಲ್ಲ ನಾಲಾಯಕ್ ಆರ್. ಅಶೋಕ್’, ಎಂದು ಸಚಿವ ಎನ್.ಎಸ್. ಬೋಸರಾಜು ವಾಗ್ದಾಳಿ ನಡೆಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''''''''ಕುಮಾರ ಚಂದ್ರಶೇಖರ ಸ್ವಾಮೀಜಿ ಮುಟ್ಟಿದರೆ ಸುಮ್ಮನೆ ಬಿಡಲ್ಲ. ಒಕ್ಕಲಿಗರು ಸೇರಿ ತೀವ್ರ ಹೋರಾಟ ಮಾಡುತ್ತೇವೆ'''''''' ಎನ್ನುವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ನಾಲಾಯಕ್ ಆಗಿ ಅವರು ಪ್ರತಿನಿತ್ಯ ಯಾವುದಾದರೊಂದು ವಿಚಾರ ಮಾತನಾಡುತ್ತಾರೆ. ಸಂವಿಧಾನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಷಾ ಇವರೆಲ್ಲಾ ಮಾತನಾಡುತ್ತಾರೆ. ಕಾಂಗ್ರೆಸ್‌ನವರು ಜಾತಿ ರಾಜಕಾರಣ ಮಾಡುತ್ತಾರೆ ಎನ್ನುತ್ತಾರೆ. ವಿಪಕ್ಷ ನಾಯಕನಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ?ಜನರಪರವಾಗಿ ಅವರಿಗೆ ಏನು ಜವಾಬ್ದಾರಿ ಇದೆ ? ರಾಜ್ಯ ಅಭಿವೃದ್ಧಿ ಬಗ್ಗೆ ಅವರಿಗೆ ಏನು ಕಾಳಜಿ ಇದೆ ? ಸಂವಿಧಾನದ ವಿರುದ್ಧ ಬೇರೆಯವರು ಮಾತನಾಡಿದರೆ ಅರೆಸ್ಟ್ ಮಾಡಿ ಅನ್ನುತ್ತಾರೆ. ಆರ್. ಅಶೋಕ್ ಅವರಿಗೆ ರಾಜ್ಯದ ಸೌಹಾರ್ದತೆ ಬೇಕಾಗಿಲ್ಲ. ರಾಜಕಾರಣಕ್ಕಾಗಿ ನಿತ್ಯ ಏನೇನೋ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಮೇಲಿನ ಆರೋಪಗಳ ವಿರುದ್ಧ ಸಚಿವರು ಮಾತನಾಡುವುದಿಲ್ಲ ಎಂಬ ಸಿಎಂ ಅಸಮಾಧಾನದ ವಿಚಾರಕ್ಕೆ ಮಾತನಾಡಿ, ಇದು ಸತ್ಯಕ್ಕೆ ದೂರವಾದ ಸಂಗತಿ, ಪ್ರತಿ ಕ್ಯಾಬಿನೆಟ್ ನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲಾಗಿದೆ. ಬಿಜೆಪಿಯವರು ಮಾಡುತ್ತಿರುವ ಆರೋಪಗಳ ಬಗ್ಗೆ ಮಾತನಾಡಲಾಗಿದೆ. ಅಷ್ಟೇ. ಬಸವರಾಜ ಬೊಮ್ಮಾಯಿ ಮಾಡಿದ್ದು ಅವರಿಗೆ ವಾಪಸ್ ಬಂದಿದೆ. ಅವರವರ ಸ್ವಂತ ಪ್ರತಿಷ್ಠೆಗಾಗಿ ಬಿಜೆಪಿ ಎರಡು ಮೂರು ಗುಂಪಾಗಿದೆ.ಬಿಜೆಪಿಯವರು ಅಳಿವು ಉಳಿವಿಗಾಗಿ ಇಂತಹ ಆಪಾದನೆ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕೆಲಸಗಳು ಜನರ ಗಮನಕ್ಕೆ ಬರಬಾರದೆಂದು ಹೀಗೆ ಮಾಡುತ್ತಿದ್ದಾರೆ.
ಬಿಜೆಪಿ ಸರ್ವೈವಲ್ ಆಗುವುದಕ್ಕೆ ಹೀಗೆ ಮಾಡುತ್ತಿರುವ ಬಗ್ಗೆ ಚರ್ಚೆಯಾಗಿದೆ. ಅಧಿವೇಶನ ಬರುತ್ತಿರುವುದರಿಂದ ಸಮರ್ಥ ಉತ್ತರಗಳನ್ನು ಕೊಡುವುದಕ್ಕೆ ಸೂಚಿಸಿದ್ದಾರೆ. ಎಲ್ಲ ಎಂಎಲ್‌ಎಗಳು ಅಧಿವೇಶನದಲ್ಲಿ ಹಾಜರಿರುವಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಹಲವು ಬಿಲ್ಲುಗಳು ಮಂಡನೆಯಾಗಲಿವೆ. ಅವುಗಳು ಪಾಸ್ ಆಗುವಂತೆ ನೋಡಿಕೊಳ್ಳಲು ಚರ್ಚಿಸಲಾಗಿದೆ. ಅದು ಬಿಟ್ಟರೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಯಾವುದೇ ಅಸಮಾಧಾನ ವ್ಯಕ್ತವಾಗಿಲ್ಲ. ಇಡೀ ಸಂಪುಟ ಸಿಎಂ ಪರವಾಗಿಯೇ ನಿಂತಿದೆ. ರಾಜ್ಯದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಹೀಗಾಗಿ ಸಿಎಂ ಅಸಮಾಧಾನ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದರು.ಜೆಡಿಎಸ್ ನವರಿಗೆ ಈ ಪರಿಸ್ಥಿತಿ ಆಗುತ್ತದೆ ಎಂದು ಮೊದಲೇ ಹೇಳಿದ್ದೆವು. ದೇವೇಗೌಡ್ರು ಇರುವಾಗಲೇ ಅವರ ಕುಟುಂಬದ್ದು ಒಂದು ರೀತಿ ಇತ್ತು. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಎನ್ನುವುದು ಜಗತ್ತಿಗೆ ಗೊತ್ತು. ಕಾಂಗ್ರೆಸ್ ಗೂ ಬರ್ತಾರೆ, ಬಿಜೆಪಿಗೂ ಹೋಗುತ್ತಾರೆ. ಅವರ ಮಾತಿಗೆ ಏನಾದರೂ ಅರ್ಥ ಇದೆಯಾ?
ಪಂಚರತ್ನ ಅಂತ ಇಡೀ ರಾಜ್ಯದಲ್ಲಿ ತಿರುಗಾಡಿದ್ರು. 123 ಸ್ಥಾನ ಬರಲಿಲ್ಲ ಅಂದರೆ ಅಂದೇ ಪಕ್ಷ ಡಿಸಾಲ್ವ್ ಮಾಡುತ್ತೇನೆ ಎಂದರು. ಮಗನನ್ನು ಚನ್ನಪಟ್ಟಣದಲ್ಲಿ ಚುನಾವಣೆಗೆ ನಿಲ್ಲಿಸಲ್ಲ ಎಂದರು. ಆದರೆ ನಿಲ್ಲಿಸುತ್ತಾರೆ ಅಂತ ಯೋಗೇಶ್ವರ್ ಗೆ 3 ತಿಂಗಳ ಮೊದಲೇ ಗೊತ್ತಿತ್ತು. ನನಗೆ ಟಿಕೆಟ್ ಕೊಡಲ್ಲ ಅಂತ ಯೋಗೇಶ್ವರ್ ಗೆ ಗೊತ್ತಿತ್ತು. ಅಶೋಕ್ ಒಬ್ಬರನ್ನು ಬಿಟ್ಟರೆ, ಉಳಿದ ಬಿಜೆಪಿಯ ಎಲ್ಲರೂ ಜೆಡಿಎಸ್ ಸೋಲಲಿ ಅಂತ ಕಾದರು. ಇಲ್ಲದಿದ್ದರೆ ನಮ್ಮ ಹೈಕಮಾಂಡ್ ಜೊತೆಗೆ ನಮಗಿಂತ ಕುಮಾರಸ್ವಾಮಿ ಜಾಸ್ತಿ ಓವರ್ ಟೇಕ್ ಮಾಡುತ್ತಾರೆ ಅಂತ ಯೋಚಿಸಿದ್ದರು.ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸಿ ಬಿಡುತ್ತಾರೆ ಅಂತ ಯೋಚಿಸಿದ್ದರು. ಅದಕ್ಕೆ ಬಿಜೆಪಿಯವರು ಜೆಡಿಎಸ್ ಸೋಲಬೇಕು ಅಂತ ನಿರ್ಧರಿಸಿದ್ದರು. ಅದಕ್ಕೆ ಡಿಕೆಶಿ ಅವರು ಹೇಳಿದ್ದು, ಬಿಜೆಪಿಯವರೆಲ್ಲಾ ನಮಗೆ ಸಹಾಯ ಮಾಡಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದರು.