ಮನೆ ಕಳೆದುಕೊಂಡ ಕಡಬ ತಾಲೂಕಿನ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ಎಂಬ ವೃದ್ಧ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ೮ನೇ ದಿನವಾದ ಜ. ೫ರಂದು ಶಾಸಕ ಅಶೋಕ್ ಕುಮಾರ್ ರೈಯವರು ಕಡಬ ತಹಸೀಲ್ದಾರ್, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮಾತುಕತೆ ನಡೆಸಿ ಭರವಸೆ ನೀಡುವ ಮೂಲಕ ಅಂತ್ಯಗೊಂಡಿದೆ.

ಶಾಸಕ ಅಶೋಕ್ ರೈ ಭರವಸೆ । ವೃದ್ಧ ದಂಪತಿಯ ಅಹೋರಾತ್ರಿ ಧರಣಿ ಅಂತ್ಯ

ಪುತ್ತೂರು: ಮನೆ ಕಳೆದುಕೊಂಡ ಕಡಬ ತಾಲೂಕಿನ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ಎಂಬ ವೃದ್ಧ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ೮ನೇ ದಿನವಾದ ಜ. ೫ರಂದು ಶಾಸಕ ಅಶೋಕ್ ಕುಮಾರ್ ರೈಯವರು ಕಡಬ ತಹಸೀಲ್ದಾರ್, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮಾತುಕತೆ ನಡೆಸಿ ಭರವಸೆ ನೀಡುವ ಮೂಲಕ ಅಂತ್ಯಗೊಂಡಿದೆ.ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಧರಣಿ ನಿರತ ರಾಧಮ್ಮ ಮತ್ತು ಮುತ್ತು ಸ್ವಾಮಿ ದಂಪತಿಯನ್ನು ಜ. ೪ರಂದು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿ, ಜ. 5ರಂದು ಅಧಿಕಾರಿಗಳನ್ನು ಕರೆಸಿ ಮಾತುಕರೆ ನಡೆಸುವ ಭರವಸೆ ನೀಡಿದ್ದರು. ಅದರಂತೆ ಸೋಮವಾರ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕೌಕ್ರಾಡಿ ಗ್ರಾಮಕರಣಿಕರನ್ನು ಪುತ್ತೂರಿಗೆ ಕರೆಸಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಸಮ್ಮುಖ ಮಾತುಕತೆ ನಡೆಸಿದರು.

ಬಳಿಕ ಧರಣಿ ನಿರತರೊಂದಿಗೆ ಮಾತನಾಡಿದ ಶಾಸಕರು, ಮನೆ ಅಡಿ ಸ್ಥಳದ ದಾಖಲೆ ಸರಿಯಾದ ತಕ್ಷಣ ಸಂಬಂಧಪಟ್ಟ ಸಚಿವರಲ್ಲಿ ಮಾತುಕತೆ ನಡೆಸಿ ವಿಶೇಷ ಪ್ರಕರಣವಾಗಿ ರಾಜೀವ ಗಾಂಧಿ ನಿಗಮದಿಂದ ಮನೆ ಕಟ್ಟುವುದಕ್ಕೆ ಅನುದಾನವನ್ನು ಕೊಡಿಸಲಾಗುವುದು. ಇದಕ್ಕೆ ಒಪ್ಪಿ ನೀವು ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ನಿಯಮ ಪ್ರಕಾರ ಅಗತ್ಯ ಕಾರ್ಯಗಳನ್ನು ಇಲಾಖೆಯಿಂದ ಮಾಡಲಾಗುವುದು ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದರು.

ಧರಣಿ ನಿರತರಿಗೆ ಜೂಸ್ ನೀಡುವ ಮೂಲಕ ಧರಣಿಯನ್ನು ಅಂತ್ಯಗೊಳಿಸಿದರು. ಬಡ ಕುಟುಂಬದ ನಾವು ನ್ಯಾಯಕ್ಕಾಗಿ ಕಳೆದ ಒಂದು ವರ್ಷದಿಂದ ಅಲೆದಾಡುತ್ತಿದ್ದೇವೆ. ಎಲ್ಲ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಡಿ.೨೯ರಿಂದ ಎಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದೇವೆ. ಇದಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ. ಸುಳ್ಯ ಕ್ಷೇತ್ರದ ಸಮಸ್ಯೆ ಆಗಿದ್ದರೂ ಅಲ್ಲಿಯ ಜನಪ್ರತಿನಿಧಿ ಸೇರಿದಂತೆ ಯಾರೊಬ್ಬರೂ ಸ್ಪಂದನೆ ನೀಡಿಲ್ಲ. ಇದೀಗ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಸಂಜೆ ಬಂದು ಭರವಸೆ ನೀಡಿದ್ದರು. ಮನೆ ಕಟ್ಟು ಜಾಗವನ್ನು ೯೪ ಸಿ ಮೂಲಕ ಜಾಗ ಮಂಜೂರು ಮಾಡುವುದು ಹಾಗೂ ಮನೆ ಕಟ್ಟಲು ಸಹಕಾರ ನೀಡಿವುದಾಗಿ ಭರವಸೆ ನೀಡಿದ್ದಾರೆ. ನಮ್ಮೊಂದಿಗೆ ಸ್ಪಂಧಿಸಿದ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ನೀತಿ ತಂಡದ ಜಯಂತ ಟಿ. ತಿಳಿಸಿದ್ದಾರೆ.ಮರು ತನಿಖೆಗೆ ಸೂಚನೆ:ತನಿಖೆಯ ವರದಿ ತಹಸೀಲ್ದಾರ್ ಕಡೆಯಿಂದ ಇನ್ನೂ ಬಂದಿಲ್ಲ. ಇದರಲ್ಲಿ ಏನಾದರೂ ತಪ್ಪು ಆಗಿದ್ದರೆ ಅಗತ್ಯ ಕ್ರಮಕ್ಕೆ ಸಬಂಧಪಟ್ಟವರಿಗೆ ಬರೆಯಲಾಗುವುದು. ೯೪ಸಿ ತಿರಸ್ಕಾರಗೊಂಡರೂ, ಮೇಲ್ಮನವಿ ಸಲ್ಲಿಸಲು ಅವಕಾಶಗಳಿದ್ದು, ಅವರು ಅದಕ್ಕೆ ಅರ್ಜಿಯನ್ನು ಸಲ್ಲಿಸುತ್ತಾರೆ. ಮರು ತನಿಖೆ ನಡೆಸಲು ತಹಸೀಲ್ದಾರ್‌ಗೆ ಸೂಚನೆ ನೀಡುತ್ತೇವೆ ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದ್ದಾರೆ. ಸಂತ್ರಸ್ಥರಾದ ರಾಧಮ್ಮ, ಮುತ್ತು ಸ್ವಾಮಿ, ನೀತಿ ತಂಡದ ಜಯಂತ್ ಟಿ., ಪುತ್ರ ಸುಬ್ರಹ್ಮಣ್ಯ, ಪುತ್ರಿ ರೇಣುಕಾ ಉಪಸ್ಥಿತರಿದ್ದರು.

ಮನೆ ಕಳೆದುಕೊಂಡ ಬಡ ಕುಟುಂಬ ನಡೆಸುವ ಪ್ರತಿಭಟನೆ ಬಗ್ಗೆ ಮಾಧ್ಯಮದ ಮೂಲಕ ಅರಿತುಕೊಂಡು ಸ್ಥಳಕ್ಕೆ ಆಗಮಿಸಿ ಆಲಿಸಲಾಗಿದೆ. ಕಡಬ ತಹಸೀಲ್ದಾರ್ ರನ್ನು ಕರೆಸಿ, ಸಹಾಯಕ ಆಯುಕ್ತರನ್ನು ಸೇರಿಸಿಕೊಂಡು ಜಿಲ್ಲಾಧಿಕಾರಿಗಳ ಮೂಲಕ ಮಾತುಕತೆ ನಡೆಸಲಾಗಿದೆ. ಅವರು ಅರ್ಜಿ ಸಲ್ಲಿಸಿದ ೯ ಸೆಂಟ್ಟ್ ಜಾಗವನ್ನು ಅವರ ಹೆಸರಿಗೆ ಮಂಜೂರು ಮಾಡಲಾಗುವುದು. ಅಲ್ಲದೆ ರಾಜೀವ ಗಾಂಧೀ ವಸತಿ ನಿಗಮದ ಮೂಲಕ ಮನೆ ಕಟ್ಟಲು ರೂ. ೨ಲಕ್ಷ ಧನ ಸಹಾಯ ಮಾಡುವ ಭರವಸೆ ನೀಡಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ. ಮುಂದಿನ ೧೦ ದಿನಗಳಲ್ಲಿ ೯೪ ಸಿ ಮೂಲಕ ವಾಸವಿದ್ದ ಜಾಗವನ್ನು ಅವರ ಹೆಸರಿಗೆ ಕಡತ ವಿಲೇವಾಡಿ ಮಾಡಿ ಸಮಸ್ಯೆ ಪರಿಹಾರ ಕೊಡುವ ಕೆಲಸ ಮಾಡಲಾಗುವುದು.-ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕರು