ಪುತ್ತೂರು: ಪುತ್ತೂರಿನಲ್ಲಿ ಸ್ಥಾಪನೆಯಾಗಿರುವ ನೂತನ ಬಯೋಗ್ಯಾಸ್ ಘಟಕ ದೇಶಕ್ಕೆ ಮಾದರಿಯಾಗಿದೆ. ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಈ ಘಟಕ ರಾಜ್ಯದ ನಗರಸಭೆಗಳ ಪೈಕಿ ಮೊದಲ ಪ್ರಯೋಗ ಎಂಬುದು ನಮಗೆಲ್ಲ ಹೆಮ್ಮಯ ವಿಚಾರ. ಬೆಂಗಳೂರಿನ ಬಿಬಿಎಂಪಿಯ ಸಭೆಯಲ್ಲೂ ಪುತ್ತೂರು ಘಟಕದ ವಿಚಾರ ಪ್ರಸ್ತಾಪವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಅನೇಕ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಘಟಕದ ಅಧ್ಯಯನ ನಡೆಸಲು ಆಗಮಿಸಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಭಾನುವಾರ ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್, ಸ್ವಚ್ಚ ಭಾರತ ಚಾರಿಟೇಬಲ್ ಟ್ರಸ್ಟ್ ಮತ್ತು ರಿಟ್ಯಾಪ್ ಸೊಲ್ಯುಷನ್ ನೇತೃತ್ವದಲ್ಲಿ ಪುತ್ತೂರು ನಗರಸಭಾ ಸಹಭಾಗಿತ್ವದಲ್ಲಿ ನಗರದ ಹೊರ ವಲಯದ ಬನ್ನೂರು ಡಂಪಿಂಗ್ ಯಾರ್ಡ್ ನಲ್ಲಿ ಸುಮಾರು ೩ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಕಾರ್ಯಾರಂಭಗೊಂಡ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇದೊಂದು ಉತ್ತಮ ಸಾಧನೆಯಾಗಿದ್ದು ಕಳೆದ ೧೨ ವರ್ಷಗಳ ನಿರಂತರ ಪ್ರಯತ್ನಗಳಿಂದ ಈ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿದೆ. ಇದಕ್ಕಾಗಿ ಸರ್ಕಾರದಿಂದ ಜಾಗ ಮತ್ತು ಅನುಮತಿ ಮಾತ್ರ ನೀಡಲಾಗಿದೆ. ಉಳಿದ ಯಾವುದೇ ಆರ್ಥಿಕ ಸಹಾಯ ಒದಗಿಸಿಲ್ಲ. ಸಾರ್ವಜನಿಕರಿಗೆ ಪ್ರಯೋಜನವಾಗುವ ಉದ್ದೇಶದಿಂದ ಯೋಜನೆಯ ರೂವಾರಿಯಲ್ಲಿ ಒಬ್ಬರಾದ ಕೃಷ್ಣನಾರಾಯಣ ಮುಳಿಯ ಅವರು ೩ ಕೋಟಿ ರು. ಸಾಲ ಪಡೆದು ಪ್ರತಿ ತಿಂಗಳು ತನ್ನ ಕೈಯಿಂದ ೬ ಲಕ್ಷ ರು. ಸಾಲದ ಕಂತು ಪಾವತಿಸುತ್ತಿದ್ದಾರೆ. ಯಾವುದೇ ಯೋಜನೆ ರೂಪಿಸುವಾಗ ಸಾಧಕ ಮತ್ತು ಬಾಧಕಗಳು, ಕಷ್ಟ ನಷ್ಟಗಳು ಅದರ ರೂವಾರಿಗಳಿಗೆ ಮಾತ್ರ ಗೊತ್ತಿರುತ್ತದೆ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಪುತ್ತೂರು ನಗರದಲ್ಲಿ ಇಂಥದೊಂದು ವೈಜ್ಞಾನಿಕ ಮಾದರಿಯ ಘಟಕ ನಿರ್ಮಾಣಗೊಂಡಿರುವುದು ಉತ್ತಮ ವಿಚಾರ. ಸ್ವಚ್ಛ ಭಾರತ ಕಲ್ಪನೆಗೆ ಇದು ಪೂರಕ ಎಂದರು. ಕೃಷ್ಣಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ ಹಾಗೂ ರೋಟರಿ ಸ್ವಚ್ಚ ಭಾರತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ, ಅಶ್ವಿನಿ ಕೃಷ್ಣ ಮುಳಿಯ, ಪುತ್ತೂರು ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ನಗರಸಭೆಯ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆ ನಿರ್ದೇಶಕಿ ಡಾ. ದಿವ್ಯಾ ಪ್ರಶಾಂತ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಅಧ್ಯಕ್ಷ ಶಶಿಧರ ಕಿನ್ನಿಮಜಲು, ರೋಟರಿ ಸ್ವಚ್ಛ ಭಾರತ್ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ರವಿ ಕುಮಾರ್ ರೈ ಕೆದಂಬಾಡಿ ಮಠ ಉಪಸ್ಥಿತರಿದ್ದರು. ಕಂಪ್ರೆಸ್ಡ್ ಬಯೋಗ್ಯಾಸ್ ಘಟಕದ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು.ನಗರದ ಸ್ವಚ್ಚತೆ ಅತ್ಯಂತ ಮುಖ್ಯವಾಗಿದ್ದು, ಕಸವನ್ನು ಸಿಕ್ಕ ಸಿಕ್ಕಲ್ಲಿ ಎಸೆಯಬಾರದು ಎಂಬ ವಿಚಾರದಲ್ಲಿ ನಾಗರಿಕರಲ್ಲಿ ಜಾಗೃತಿಯ ಅಗತ್ಯವಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳಿಲ್ಲದೆ ನಗರದ ಅಭಿವೃದ್ಧಿಯನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ಯಾವುದೇ ನಗರದಲ್ಲಿ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕವಾಗಿ ನಡೆದರೆ ಮಾತ್ರ ಆ ನಗರ ಅಭಿವೃದ್ಧಿ ಪಥದತ್ತ ಹೋಗಲು ಸಾಧ್ಯವಿದೆ. ಪ್ರತಿ ದಿನ ೮ ಟನ್ ಕಸವನ್ನು ಗ್ಯಾಸ್ ಆಗಿ ಪರಿವರ್ತಿಸುವ ಶಕ್ತಿ ಈ ಘಟಕಕ್ಕಿದೆ. ಈಗ ೩ ಟನ್ ಮಾತ್ರ ಹಸಿ ತ್ಯಾಜ್ಯ ಸಿಗುತ್ತಿದೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ೮ ಟನ್ ತ್ಯಾಜ್ಯ ಘಟಕಕ್ಕೆ ಸಿಗುವ ವ್ಯವಸ್ಥೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿರ ಸಹಕಾರ ಅಗತ್ಯವಿದೆ.
-ಅಶೋಕ್ ಕುಮಾರ್ ರೈ ಪುತ್ತೂರು ಶಾಸಕರು