ಧಾರಾಕಾರ ಮಳೆಗೆ 20ಕ್ಕೂ ಹೆಚ್ಚು ಮನೆಗಳು ಜಲಾವೃತ

| Published : May 26 2024, 01:34 AM IST

ಧಾರಾಕಾರ ಮಳೆಗೆ 20ಕ್ಕೂ ಹೆಚ್ಚು ಮನೆಗಳು ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ 5 ಮತ್ತು 6ನೇ ತಿರುವಿನಲ್ಲೂ ಕೂಡ ಚರಂಡಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಗಿತ್ತು. ಪಟ್ಟಣದ ನಟರಾಜ ಬಡಾವಣೆಯಲ್ಲಿ ಸುಮಾರು 6 ಮನೆಗಳಿಗೆ ನೀರು ನುಗ್ಗಿದೆ ಜೊತೆಗೆ ಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ತುಂಬಿಕೊಂಡು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ನಂಜನಗೂಡು

ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಮೂರು ಗಂಟೆಗಳಿಗೂ ಹೆಚ್ಚುಕಾಲ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಅಶೋಕಪುರಂ ಬಡಾವಣೆ, 5 ಮತ್ತು 6 ಕ್ರಾಸ್, ನಟರಾಜ ಬಡಾವಣೆಯಲ್ಲಿ ಮನೆಗಳಿಗೆ ಚರಂಡಿಯ ಕೊಳಚೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

ನಂಜನಗೂಡು ಪಟ್ಟಣದ 27ನೇ ವಾರ್ಡ್‌ ನ ಅಶೋಕಪುರಂ ಬಡಾವಣೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿಯ ಕೊಳಚೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ, ಜೊತೆಗೆ ಒಂದು ಮನೆಯ ಗೋಡೆ ಕುಸಿದು ಬಿದ್ದಿದೆ. ದುರದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಅಶೋಕಪುರಂ ಬಡಾವಣೆಯಲ್ಲಿ ವ್ಯವಸ್ಥಿತವಾದ ಚರಂಡಿಯ ಇಲ್ಲದೆ ಕೊಳಚೆ ನೀರು ಮನೆಗಳಿಗೆ ನುಗ್ಗಿದೆ. ಕಳೆದ ಮೂರು ನಾಲ್ಕು ಬಾರಿ ಮಳೆ ಬಂದಾಗ ಮನೆಗಳು ಸಂಪೂರ್ಣವಾಗಿ ಜಲಾವೃತವಾಗುತ್ತಿವೆ. ಇದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು ಸಂಪೂರ್ಣವಾಗಿ ನಾಶವಾಗಿದೆ. ವಾಸಿಸಲು ಮನೆ ಇಲ್ಲದಂತಾಗಿದೆ. ಚರಂಡಿ ವ್ಯಸ್ಥೆಯನ್ನು ಸರಿಪಡಿಸುವಂತೆ ನಗರಸಭಾ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಪ್ರತಿ ಬಾರಿ ನಮಗೆ ತೊಂದರೆಯಾಗುತ್ತಿದೆ. ಕೂಲಿ ಮಾಡಿ ಜೀವಿಸುವ ನಮಗೆ ಊಟಕ್ಕೂ ಗತಿಯಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ 5 ಮತ್ತು 6ನೇ ತಿರುವಿನಲ್ಲೂ ಕೂಡ ಚರಂಡಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಗಿತ್ತು. ಪಟ್ಟಣದ ನಟರಾಜ ಬಡಾವಣೆಯಲ್ಲಿ ಸುಮಾರು 6 ಮನೆಗಳಿಗೆ ನೀರು ನುಗ್ಗಿದೆ ಜೊತೆಗೆ ಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ತುಂಬಿಕೊಂಡು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.

ಸಾರ್ವಜನಿಕರ ಆಕ್ರೋಶದಿಂದ ಎಚ್ಚೆತ್ತ ನಗರಸಭಾ ಅಧಿಕಾರಿಗಳು ಶನಿವಾರ ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದು ಚರಂಡಿಳನ್ನು ಸ್ವಚ್ಛತೆ ನಡೆಸಿದರು.