ಸಾರಾಂಶ
- ಮಹಾರಾಜ ಕಾಲೇಜು ಪ್ರಧ್ಯಾಪಾಕ ಹಾಗೂ ಆಡಳಿತಾಧಿಕಾರಿ ಡಾ.ವಿ. ಷಣ್ಮಗಂ ಅಭಿಮತ----
ಕನ್ನಡಪ್ರಭ ವಾರ್ತೆ ಮೈಸೂರುಬುದ್ಧನ ಕಾಲದ ಸಾಕ್ಯ ಕುಲದ ಗಣತಂತ್ರ ವ್ಯವಸ್ಥೆಯ ಗುಣಗಳು ಇಂದಿನ ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ಅಡಕವಾಗಿದೆ ಎಂದು ಮಹಾರಾಜ ಕಾಲೇಜು ಪ್ರಧ್ಯಾಪಾಕ ಹಾಗೂ ಆಡಳಿತಾಧಿಕಾರಿ ಡಾ.ವಿ. ಷಣ್ಮಗಂ ತಿಳಿಸಿದರು.
ನಗರದ ಅಶೋಕಪುರಂ ಅಭಿಮಾನಿ ಬಳಗವು ಆಯೋಜಿಸಿದ್ದ ಸಂವಿಧಾನೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಂವಿಧಾನ ಪೀಠಿಕೆಯಲ್ಲಿ ಅಡಕವಾಗಿರುವ ಪ್ರತಿ ಪದಗಳನ್ನು ಎಳೆಎಳೆಯಾಗಿ ವಿವರಿಸಿದರು.ಕ್ರಿ.ಪೂ 6ನೇ ಶತಮಾನವು ಪ್ರಜಾತಂತ್ರ ವ್ಯವಸ್ಥೆಯ ಭವ್ಯಕಾಲ. ಇಡಿ ಭಾರತದ ಇತಿಹಾಸದಲ್ಲೇ ಗಣ ವ್ಯವಸ್ಥೆಯ ರಾಜರುಗಳು ಪ್ರಪ್ರಥಮವಾಗಿ ಏಕತೆಯನ್ನು ಸಾದಿಸಿದರು. ಭಾರತದ ಈ ಒಗ್ಗಟಿನ ಗುಣ ಮತ್ತು ಅಪಾರ ಸೈನಿಕ ಶಕ್ತಿಗೆ ಹೆದರಿ ಭಾರತದ ಗಡಿಯೋಳಗೆ ಬಂದಿದ್ದ ಅಲೆಗ್ಸಾಂಡರ್ ನ ಸೈನ್ಯವು ಯುದ್ಧ ಮಾಡಲು ಹೆದರಿ ವಾಪಸ್ ಹೋಯಿತು ಎಂದರು.
ಮೌರ್ಯರ ಕೊನೆಯ ದೊರೆ ಬೃಹದ್ರತಮೌರ್ಯನ ಕಾಲದವರೆಗೂ ಸುಮಾರು ಐದು ಶತಮಾನಗಳ ಕಾಲ ಏಕತೆಯಿಂದ ಇದ್ದ ಭಾರತವು ಶುಂಗವಂಶದ ಆಡಳಿತ ಕಾಲದಲ್ಲಿ ಮತ್ತೆ ಒಡೆದು ಚಿದ್ರವಾಯಿತು. ಈಗ ಎರಡೂವರೆ ಸಾವಿರ ವರ್ಷದ ನಂತರ ಭಾರತವು ಎರಡನೇ ಬಾರಿಗೆ ಗಣತಂತ್ರ ವ್ಯವಸ್ಥೆಗೆ ನೋಡುವಂತಾಗಿದೆ. ಇದಕ್ಕೆ ಕಾರಣ ಡಾ. ಅಂಬೇಡ್ಕರ್ ಅವರು ನೀಡಿರ ಸಂವಿಧಾನ ಎಂದು ಅವರು ತಿಳಿಸಿದರು.ಲೇಖಕ ಸಿದ್ಧಸ್ವಾಮಿ ಮಾತನಾಡಿ, 1950ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊದಲು ಸ್ವಾಗತಿಸಿದ್ದು ಮೈಸೂರು ಸಂಸ್ಥಾನ. ಆಗ ಜಯಚಾಮರಾಜ ಒಡೆಯರ್ ಅವರು ಮೈಸೂರು ದೇಶದ ರಾಜರಾಗಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವ ಘೋಷಣೆಯಾಗುತ್ತಿದ್ದಂತೆ ಮಹಾರಾಜರು ಸಿಂಹಾಸನದಿಂದ ಕೆಳಗಿಳಿದರು. ಆ ವರ್ಷ ಜಂಬೂಸವಾರಿಯಲ್ಲೂ ಪಟ್ಟದ ಆನೆಯ ಮೇಲೆ ಕೂರಲಿಲ್ಲ. ನಂತರ ಅವರನ್ನು ಸರ್ಕಾರವು ರಾಜ್ಯಪಾಲರನ್ನಾಗಿ ಮಾಡಿ ಗೌರವ ನೀಡಿತು ಎಂದು ಸ್ಮರಿಸಿದರು.
ಅಶೋಕಪುರಂ ಜನತೆಗೆ ಎಲೆತೋಟ ದಕ್ಕಿದ್ದು 1974ರ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದಾಗಿನಿಂದ ಅದಕ್ಕೂ ಮೊದಲು ಅರಸು ಕುಲದವರು ಗೇಣಿದಾರರಾಗಿದ್ದ ಎಲೆ ತೋಟದಲ್ಲಿ ವಾರ್ಷಿಕ ವಂತಿಕೆಯ ಆಧಾರದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾವನೂರು ವರದಿಯನ್ನು ಜಾರಿಗೆ ತಂದರು. ಸಾಮಾಜಿಕ ಮತ್ತು ಧಾರ್ಮಿಕ ಅನಿಷ್ಟಗಳಾದ ದೇವದಾಸಿ ಮತ್ತು ಗೆಜ್ಜೆ ಪೂಜೆಯಂತಹ ಪದ್ಧತಿಗಳನ್ನು ತೊಡೆದು ಹಾಕಿದರು ಎಂದು ಅವರು ಹೇಳಿದರು.ನಗರಪಾಲಿಕೆ ಮಾಜಿ ಸದಸ್ಯೆ ಫಲ್ಲವಿ ಬೇಗಂ, ಪದ್ಮರಾಜ್, ಅಶೋಕಪುರಂ ಅಭಿಮಾನಿ ಬಳಗದ ವಿಷ್ಣುಪ್ರಸಾದ್, ಉಮೇಶ್,
ಗಿರಿ ಬದನವಾಳು, ಶ್ರೀನಿವಾಸ್, ಬಬಿತಾ, ಶಿವಣ್ಣ, ಸಿದ್ದರಾಜು ಮೊದಲಾದವರು ಇದ್ದರು.