ಅಧಿವೇಶನದಲ್ಲಿ ಆರ್.ಅಶೋಕ್ ಹೇಳಿಕೆಗೆ ಕರಾವಳಿಯಲ್ಲಿ ಬಜರಂಗದಳ ಆಕ್ರೋಶ

| Published : Feb 22 2024, 01:48 AM IST

ಸಾರಾಂಶ

ಬಜರಂಗದಳ ಮಂಗಳೂರು ವಿಭಾಗ ಸಹ ಸಂಯೋಜಕ್ ಪುನೀತ್ ಅತ್ತಾವರ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು‘ನಾನು ಗೃಹ ಸಚಿವನಾಗಿದ್ದಾಗ ಬಜರಂಗದಳದವರ ಮೇಲೆಯೇ ಗೂಂಡಾ ಕಾಯ್ದೆ ಹಾಕಿದ್ದೆ’ ಎಂದು ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ ವಿಪಕ್ಷ ನಾಯಕ ಆರ್‌.ಅಶೋಕ್‌ ವಿರುದ್ಧ ಬಜರಂಗದಳ ಸಂಘಟನೆ ಕಿಡಿ ಕಾರಿದೆ. ಈ ಬಗ್ಗೆ ಮಂಗಳೂರಿನಲ್ಲಿ ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಂಗಳೂರಿನ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಿ ಎಂದು ವಿಪಕ್ಷ ನಾಯಕ ಆರ್‌‌.ಅಶೋಕ್‌ಗೆ ಬಜರಂಗದಳ ಮಂಗಳೂರು ವಿಭಾಗ ಸಹ ಸಂಯೋಜಕ್ ಪುನೀತ್ ಅತ್ತಾವರ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಅಧಿವೇಶನದಲ್ಲಿ ಮಂಗಳೂರು ಪಬ್ ದಾಳಿ ಬಗ್ಗೆ ಮಾತನಾಡಿದ್ದ ಆರ್‌. ಅಶೋಕ್‌ ಅವರು, ಗೃಹ ಸಚಿವ ಡಾ.ಪರಮೇಶ್ವರ್‌ಗೆ ಬುದ್ಧಿ ಹೇಳುವ ಭರದಲ್ಲಿ, ನಾನು ಅಂದು ಗೃಹ ಸಚಿವನಾಗಿದ್ದಾಗ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನಾನು ಆಗ ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ನೀವು ಕೂಡ ಜೆರೋಸಾ ಶಾಲಾ ಪ್ರಕರಣದಲ್ಲಿ ಒತ್ತಡಕ್ಕೆ ಮಣಿಯದೆ ಶಾಸಕರ ವಿರುದ್ಧ ಕೇಸು ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಶೋಕ್ ಅವರ ಈ ಹೇಳಿಕೆ ವಿರುದ್ಧ ಕರಾವಳಿಯಲ್ಲಿ ಬಜರಂಗದಳ ಕೆಂಡವಾಗಿದ್ದು, ‘ನೀವು ಆರ್. ಅಶೋಕ್ ಅಲ್ಲ. ಅಡ್ಜಸ್ಟ್ ಮೆಂಟ್ ಅಶೋಕ್ ಅವರೇ.’ ‘ನಿಮ್ಮ ನಾಲಗೆಯನ್ನು ನಾಲಗೆ ರೀತಿಯಲ್ಲಿ ಬಳಸಿ, ಎಕ್ಕಡದ ರೀತಿ ಬಳಸಿಕೊಳ್ಳಬೇಡಿ,

ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ, ‘ಪ್ರತಿಪಕ್ಷನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ’,‘ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ’, ‘ಒಂದಾ ಬಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ, ಇಲ್ಲದಿದ್ದರೆ ಬಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ’ ಎಂದು ಫೇಸ್‌ಬುಕ್‌ನಲ್ಲಿ ಆರ್‌.ಅಶೋಕ್‌ಗೆ ಪುನಿತ್‌ ಎಚ್ಚರಿಕೆ ಪೋಸ್ಟ್‌ ಮಾಡಿರುವುದು ವೈರಲ್‌ ಆಗಿದೆ.