ಇಂದಿನಿಂದ ಮಧೂರು ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

| Published : Mar 26 2025, 01:34 AM IST

ಸಾರಾಂಶ

ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮಾ.26ರಿಂದ ಏ.7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಇತಿಹಾಸ ಪ್ರಸಿದ್ಧ ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮಾ.26ರಿಂದ ಏ.7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಧುಸೂಧನ ಆಯಾರ್‌ ಮಂಗಳೂರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸುಮಾರು 10 ಕೋಟಿ ರು.ಗಳ ಯೋಜನೆ ತಯಾರಿಸಲಾಗಿದೆ. ಕ್ಷೇತ್ರದ ನವೀಕರಣ ಕಾಮಗಾರಿಗಳಿಗೆ ಸುಮಾರು 24 ಕೋಟಿ ರು. ಖರ್ಚು ಮಾಡಲಾಗಿದೆ. ಪ್ರಧಾನ ದೇಗುಲದ ನವೀಕರಣ, ಉಪದೇವತೆಗಳ ಗುಡಿಗಳ ನವೀಕರಣ, ಶಿಲಾಮಯ ವೀರಭದ್ರನ ಗುಡಿ ನಿರ್ಮಾಣ, ಸುತ್ತು ಪೌಳಿಗಳ ದುರಸ್ತಿ ಕಾರ್ಯ, ಪೌಳಿಗಳ ನೆಲಕ್ಕೆ ಗ್ರಾನೈಟ್‌ ಅಳವಡಿಸುವಿಕೆ, ಒಳ ಅಂಗಣಕ್ಕೆ ಕಗ್ಗಲ್ಲಿನ ಚಪ್ಪಡಿಗಳನ್ನು ಅಳವಡಿಸುವಿಕೆ, ಒಳ ಚರಂಡಿ ಕಾಮಗಾರಿ, ಗಣಪತಿ ದೇವರ ಮುಖಮಂಟಪ, ಶಿವ ದೇವರ ನಡೆ, ರಾಜಾಂಗಣ, ನವೀಕರಣ, ನೈವೇದ್ಯ ಕೋಣೆಯ ಪುನರ್‌ ನಿರ್ಮಾಣ, ಅನ್ನಛತ್ರ, ಯಾತ್ರಿ ನಿವಾಸ, ಸೇವಾ ಕೌಂಟರ್‌, ಶಿಲಾಮಯ ಸುಂದರ ಮಹಾದ್ವಾರ, ಹೊರಾಂಗಣಕ್ಕೆ ಚಪ್ಪಡಿ ಹಾಗೂ ಇಂಟರ್‌ ಲಾಕ್‌ ಅಳವಡಿಸುವ ಕೆಲಸ, ವೇಸ್ಟ್‌ ವಾಟರ್‌ ಮ್ಯಾನೇಜ್‌ಮೆಂಟ್‌ ಪ್ಲಾಂಟ್‌, ಪಶ್ಚಿಮ ಭಾಗದ ಆವರಣ ಗೋಡೆ, ಮೂಲಸ್ಥಾನದಲ್ಲಿ ಸವಾರಿ ಕಟ್ಟೆಯ ನವೀಕರಣ, ಪಂಜುರ್ಲಿ ಗುಡಿ, ಮದರು ಮಂಟಪ ನಿರ್ಮಾಣ ಮುಂತಾದ ಹಲವು ಕಾಮಗಾರಿಗಳನ್ನು ನವೀಕರಣ ಸಮಿತಿ ನಿರ್ವಹಿಸಿದೆ ಎಂದು ತಿಳಿಸಿದರು.ಬ್ರಹ್ಮಕಲಶೋತ್ಸವಕ್ಕೆ ಪ್ರತಿದಿನ ಬೇರೆ ಬೇರೆ ಭಾಗಗಳಿಂದ ಸುಮಾರು ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ವಾಹನ ಪಾರ್ಕಿಂಗ್‌ ಮಾಡಲು ಮಧೂರು ಬಯಲು, ಕೊಟ್ಟಬಯಲು, ಕೊಟ್ಟಎರಿಕ್ಕಳ ಬಯಲು, ಚೆನಕ್ಕೊಡು ಬಯಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿ.ಐ.ಪಿಗಳ ವಾಹನಗಳಿಗೆ ಪಾಸ್‌ ನೀಡಲಾಗುವುದು. ಬಸ್‌ ಸೌಕರ್ಯ ಪರಕ್ಕಿಲ ತನಕ ಮಾತ್ರ ಇರುವುದು. ನಡೆದು ಬರಲು ಅಶಕ್ತರಾದವರಿಗೆ ವಿಶೇಷ ವಾಹನ ಸೌಕರ್ಯ ಕಲ್ಪಿಸಲಾಗುತ್ತಿದೆ. ಆರೋಗ್ಯ ಇಲಾಖೆ ಮತ್ತು ವಿವಿಧ ಆಸ್ಪತ್ರೆಗಳ ಸಹಕಾರದಿಂದ 24 ಗಂಟೆಗಳ ಕಾಲ ಆರೋಗ್ಯಕ್ಕೆ ಸಂಬಂಧಿಸಿದ ಸೇವೆ ಒದಗಿಸಲಾಗುವುದು. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವ್ಯವಸ್ಥೆ, 24 ಗಂಟೆಗಳ ಕಾಲ ಕ್ಯಾಂಟೀನ್‌ ಚಾಲ್ತಿಯಲ್ಲಿರುತ್ತದೆ. ಅಗತ್ಯವಿರುವ ಅತಿಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಾ. 26ರಂದು ಮಧ್ಯಾಹ್ನ 3ಗಂಟೆಗೆ ಮಧೂರು ಪಂಚಾಯ್ತಿ ವ್ಯಾಪ್ತಿಯ ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಣೆ ಆಗಲಿದ್ದು, ಬಳಿಕ ಬೇರೆ ಬೇರೆ ಪ್ರದೇಶಗಳಿಂದ ಹೊರೆಕಾಣಿಕೆ ಬರಲಿದೆ ಎಂದು ಹೇಳಿದರು.

ಬ್ರಹ್ಮಕಲಶ ಅಂಗವಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹ ಕೇಂದ್ರ ತೆರೆಯಲಾಗಿದೆ. ಮಾ.27ರಂದು ಬೆಳಗ್ಗೆ 8.30ಕ್ಕೆ ಶರವು ದೇವಳದಿಂದ ಮಧೂರಿಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ವಿವಿಧ ಸೇವೆಗಳ ರಶೀದಿಯನ್ನು ಶರವು ದೇವಳದ ಹೊರೆಕಾಣಿಕೆ ಕೇಂದ್ರದಲ್ಲಿ ಮಾಡಿಸಬಹುದು ಎಂದು ಮಧುಸೂದನ ಆಯಾರ್‌ ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕಾರ್ತಿಕ್‌ ಶೆಟ್ಟಿ ಮಜಿಬೈಲು, ಉಪಾಧ್ಯಕ್ಷರಾದ ಸುಕುಮಾರ್‌ ಕುದ್ರೆಪಾಡಿ, ವಿಜಯ್‌ ರೈ ಮಲ್ಲಂಗೈ, ಸಾಂಸ್ಕೃತಿಕ ಸಮಿತಿ ಸಹಸಂಚಾಲಕ ರಾಜೇಶ್‌ ಮಾಸ್ಟರ್‌ ಅಗಲ್ಪಾಡಿ, ಜತೆ ಕಾರ್ಯದರ್ಶಿ ಚಂದ್ರಕಾಂತ್‌ ಇದ್ದರು.