ಸಾರಾಂಶ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಸೀಮೆಯ ಶ್ರೀ ಕ್ಷೇತ್ರ ಇಟಗಿಯ ಮಹತೋಬಾರ ಶ್ರೀ ರಾಮೇಶ್ವರ ದೇವರ, ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವರ ದಿವ್ಯಾಷ್ಟಬಂಧ ಮಹೋತ್ಸವ ಏ. ೨ರಿಂದ ೧೩ರ ವರೆಗೆ ವೇ. ಕಟ್ಟೆ ಶಂಕರ ಭಟ್ಟರ ನೇತೃತ್ವದಲ್ಲಿ ಜರುಗಲಿದೆ.
ಸಿದ್ದಾಪುರ: ಬಿಳಗಿ ಸೀಮೆಯ ಶ್ರೀ ಕ್ಷೇತ್ರ ಇಟಗಿಯ ಮಹತೋಬಾರ ಶ್ರೀ ರಾಮೇಶ್ವರ ದೇವರ, ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವರ ದಿವ್ಯಾಷ್ಟಬಂಧ ಮಹೋತ್ಸವ ಏ. ೨ರಿಂದ ೧೩ರ ವರೆಗೆ ವೇ. ಕಟ್ಟೆ ಶಂಕರ ಭಟ್ಟರ ನೇತೃತ್ವದಲ್ಲಿ ಜರುಗಲಿದೆ ಎಂದು ಅಷ್ಟಬಂಧ ಮಹೋತ್ಸವ ಸಮಿತಿಯ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ವಿವರಗಳನ್ನು ನೀಡಿ, ೬೦ ವರ್ಷಗಳ ಆನಂತರ ನಡೆಯುತ್ತಿರುವ ಈ ಮಹೋತ್ಸವ ಐತಿಹಾಸಿಕ ಮೈಲಿಗಲ್ಲು. ತ್ರಿಕಾಲ ಬಲಿ ನಡೆಯುವ ಅತಿ ವಿರಳ ದೇವಾಲಯಗಳಲ್ಲಿ ಇದೂ ಒಂದಾಗಿದ್ದು, ಬಿಳಗಿ ಸೀಮೆಯ ಮಾನ್ಯತೆ ಪಡೆದ ಕ್ಷೇತ್ರವಾಗಿದೆ. ಏ. ೨ರಿಂದ ಅಷ್ಟಬಂಧ ಕಾರ್ಯಕ್ರಮಕ್ಕೂ ಮುಂಚಿನ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಏ. ೪ರಂದು ಅಷ್ಟಬಂಧ ನೆರವೇರಲಿದೆ. ಏ. ೧೦ರಿಂದ ಮಹಾರುದ್ರ, ಶತಚಂಡೀಹವನ, ಭಾಗವತ ಸಪ್ತಾಹ, ಮಹಾರಥೋತ್ಸವವೂ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ೩ ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ಇರಲಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಏ. ೧೦ರಂದು ಜರುಗುವ ಮಹಾಧರ್ಮಸಭೆಯಲ್ಲಿ ಆಶೀರ್ವಚನ ನೀಡುವರು. ಅಷ್ಟಬಂಧದ ಕುರಿತು ವೇ. ಕಟ್ಟೆ ಶಂಕರ ಭಟ್ಟರು, ಬಿಳಗಿ ಸೀಮೆ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಉಪನ್ಯಾಸ ನೀಡುವರು. ಹಲವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪ್ರತಿದಿನ ಬೆಳಗ್ಗೆ ಭಜನಾ ಕಾರ್ಯಕ್ರಮ, ಸಂಜೆ ನೃತ್ಯ, ಸಂಗೀತ, ತಾಳಮದ್ದಳೆ, ಯಕ್ಷಗಾನ ಮುಂತಾಗಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ಭಕ್ತಾದಿಗಳಿಗೆ ಊಟೋಪಚಾರ, ಪ್ರಥಮ ಚಿಕಿತ್ಸೆ ಮುಂತಾಗಿ ವ್ಯವಸ್ಥೆಗೊಳಿಸಲಾಗುವುದು ಎಂದು ಹೇಳಿದರು. ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಗಡೆ, ಸಮಿತಿಯ ಪದಾಧಿಕಾರಿಗಳು ಅಷ್ಟಬಂಧ ಕಾರ್ಯಕ್ರಮದ ನಂತರದಲ್ಲಿ ದೇವಾಲಯದಲ್ಲಿ ಪ್ರತಿದಿನ ಮಧ್ಯಾಹ್ನ ಅನ್ನದಾಸೋಹ ನಡೆಸಲು ಸಂಕಲ್ಪಿಸಿದ್ದು ಶ್ಲಾಘನೀಯ ಎಂದು ಹೇಳಿದರು.ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಗಡೆ ಕೊಡ್ತಗಣಿ, ಇಟಗಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ನಾಯ್ಕ, ದೇವಾಲಯ ಮತ್ತು ಅಷ್ಟಬಂಧ ಸಮಿತಿ ಪದಾಧಿಕಾರಿಗಳಾದ ಮಹೇಶ ಭಟ್, ಗಜಾನನ ಹೆಗಡೆ, ರಮಾನಂದ ನಾಯ್ಕ ಹರಗಿ ಮುಂತಾದವರಿದ್ದರು.