ಸಾರಾಂಶ
ಹುಬ್ಬಳ್ಳಿ:
ಕುಂದಗೋಳ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಿಂಚಿನ ಸಂಚಾರ ಮಾಡಿದರು.ಶೆರೇವಾಡ, ಯರೆಬೂದಿಹಾಳ, ಹರ್ಲಾಪುರ, ಸುಲ್ತಾನಪುರ, ಇಂಗಳಗಿ, ಗುಡಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿ ಅಬ್ಬರದ ಪ್ರಚಾರ ನಡೆಸಿದರು.ಈ ವೇಳೆ ಮಾತನಾಡಿದ ಅಸೂಟಿ, ಬಡವರ, ಶೋಷಿತರ, ಹಿಂದುಳಿದವರ ಅಭಿವೃದ್ಧಿ ಏನಿದ್ದರೂ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾಲ್ಕು ಸಲ ಬಿಜೆಪಿಗೆ ಅವಕಾಶ ಕೊಟ್ಟು ನೋಡಿದ್ದೀರಿ. ಈ ಸಲ ನನಗೊಂದು ಅವಕಾಶ ಕೊಟ್ಟು ನೋಡಿ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ ತೋರಿಸುತ್ತೇನೆ. ನಿಮ್ಮ ಮನೆಯ ಮಗನಂತೆ ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸಿ ನಿಮ್ಮ ಬದುಕು ಹಸನು ಮಾಡುತ್ತೇನೆ. ಕಾಂಗ್ರೆಸ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಈ ವರೆಗೂ ಮಹದಾಯಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಮಹದಾಯಿ ವಿಷಯದಲ್ಲಿ ಬರೀ ರಾಜಕಾರಣ ಮಾಡುತ್ತಾ ಸಾಗಿದೆ ಎಂದು ಟೀಕಿಸಿದರು.ಟೆಂಪಲ್ ರನ್:
ಇದೇ ವೇಳೆ ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಕೂಡ ಮಾಡಿದ್ದು ವಿಶೇಷ. ಹರ್ಲಾಪೂರದ ಶ್ರೀ ಗ್ರಾಮದೇವತೆ, ಸುಲ್ತಾನಪುರದ ಶ್ರೀ ಭಾಗ್ಯದುರ್ಗಾದೇವಿ, ಇಂಗಳಗಿ ಗ್ರಾಮದ ಶ್ರೀ ಮರಿಯಮ್ಮದೇವಿ, ಶ್ರೀ ಬಸವೇಶ್ವರ, ಶ್ರೀ ಮಾರುತಿ, ಶ್ರೀ ದ್ಯಾಮವ್ವದೇವಿ ಮತ್ತು ಊರಿನ ದರ್ಗಾ, ಯಲಿವಾಳದ ಗ್ರಾಮದ ಶ್ರೀ ವೀರಭದ್ರೇಶ್ವರ, ಗುಡಗೇರಿಯ ಶ್ರೀ ಪರ್ವತೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಹನುಮಾನ, ಶ್ರೀ ಸಂಗಮೇಶ್ವರ, ಶ್ರೀ ಬಸವೇಶ್ವರ ಹಾಗೂ ದ್ಯಾಮವ್ವದೇವಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಗ್ರಾಮಗಳಲ್ಲಿ ಸಂಚರಿಸುತ್ತಾ ಗ್ರಾಮಸ್ಥರ ಕುಶಲೋಪರಿ ವಿಚಾರಿಸಿ ಸಮಸ್ಯೆಗಳಿಗೆ ಕಿವಿಯಾದರು. ಈ ವೇಳೆ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಮುಖಂಡರಾದ ಧೃತಿ ಸಾಲ್ಮನಿ, ಶಿವಾನಂದ ಬೆಂತೂರ, ವೆಂಕನಗೌಡ್ರ ಹಿರೇಗೌಡ್ರ, ಷಣ್ಮುಖ ಶಿವಳ್ಳಿ, ಮಂಜುನಾಥ್ ಮಾಳಪ್ಪನವರ ಸೇರಿದಂತೆ ಪಕ್ಷದ ಅಭಿಮಾನಿಗಳು ಮತ್ತಿತರರು ಇದ್ದರು.