ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ಅವರಿಗೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ದೂರು ಸಲ್ಲಿಸಲಾಯಿತು.
- ಕ್ಯಾಮರಾಮನ್ ದಿನೇಶ್‌ಗೆ ಏಕವಚನದಲ್ಲಿ ನಿಂದಿಸಿ ದರ್ಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ಅವರಿಗೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ದೂರು ಸಲ್ಲಿಸಲಾಯಿತು.ಪಂಚಮಸಾಲಿ ಮಠದಲ್ಲಿ ಶ್ರೀಗಳನ್ನು ಮಾತನಾಡಿಸಲು ಪತ್ರಕರ್ತರು ಮುಂದಾದಾಗ ಎದುರಿಗೆ ಬಂದ ಪರಮೇಶ್ವರ ಹೆಗಡೆ ಅವರು ಮಾಧ್ಯಮದವರನ್ನು ತಡೆದು ನಿಲ್ಲಿಸಿದ್ದಾರೆ. ನಿಮ್ಮಿಂದಲೇ ಇಂತಹ ಗಲಾಟೆಗಳು ನಡೆಯುತ್ತವೆ, ನೀವಿಲ್ಲದಿದ್ದರೆ ಎಲ್ಲವೂ ಸರಿ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಟಿವಿ ಮಾಧ್ಯಮದ ಕ್ಯಾಮರಾಮನ್ ದಿನೇಶ್ ಅವರನ್ನು ಏಕವಚನದಲ್ಲಿ ನಿಂದಿಸಿ ದರ್ಪ ತೋರಿದ್ದಾರೆ ಎಂದು ಮಾಧ್ಯಮದವರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇಳೆ ಸಾರ್ವಜನಿಕರು ಶೂ ಮತ್ತು ಚಪ್ಪಲಿಗಳನ್ನು ತೂರುತ್ತಿದ್ದರೂ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಎಎಸ್ಪಿ, ಅದನ್ನು ಪ್ರಶ್ನಿಸಿದ ಮಾಧ್ಯಮದವರ ವಿರುದ್ಧವೇ ಕೆಂಡಮಂಡಲ ಆಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಈ ಹಿಂದೆ ಉಪ ಚುನಾವಣೆ ಪ್ರಚಾರದ ವೇಳೆಯೂ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಮಾತನಾಡಿಸಲು ಹೋದ ಸುದ್ದಿಗಾರರನ್ನು ಎಳೆದಾಡಿ ವಾಗ್ವಾದ ನಡೆಸಿದ್ದ ಘಟನೆಯನ್ನು ಇಲ್ಲಿ ಪ್ರಸ್ತುತಪಡಿಸಿ ಪತ್ರಕರ್ತರು ಮಾತನಾಡಿದರು. ಕರ್ತವ್ಯನಿರತ ಪತ್ರಕರ್ತರ ಮೇಲೆ ಪದೇಪದೇ ದರ್ಪ ತೋರುತ್ತಿರುವ ಅಧಿಕಾರಿಯು ತಕ್ಷಣವೇ ಕ್ಷಮೆಯಾಚಿಸಬೇಕು. ಇಲಾಖೆ ಮೇಲಾಧಿಕಾರಿಗಳು ಈ ವಿಚಾರ ಗಂಭೀರವಾಗಿ ಪರಿಗಣಿಸಿ, ಅವರನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭ ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಅಧ್ಯಕ್ಷ ನಾಗರಾಜ್ ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಹಿರಿಯ ಪತ್ರಕರ್ತರಾದ ಸಿದ್ದಯ್ಯ ಹಿರೇಮಠ್, ಟಿ.ಎಸ್. ತಿಪ್ಪೇಸ್ವಾಮಿ, ಬಸವರಾಜ್ ದೊಡ್ಮನಿ, ಎ.ಎನ್. ನಿಂಗಪ್ಪ, ರಾಜೇಶ್, ಸಿಕಂದರ್, ಮಹಾಂತೇಶ್, ಹೆಚ್.ಎಂ.ಪಿ. ಕುಮಾರ್, ಪುನೀತ್ ಆಪ್ತಿ, ಮಧು ನಾಗರಾಜ್, ದಿನೇಶ್, ಶಿವುಕುಮಾರ್, ನೂರುಲ್ಲಾ, ಲೋಕೇಶ್, ರಮೇಶ್, ಕಿರಣಕುಮಾರ್, ಶಂಭು, ಅಣ್ಣಪ್ಪ ಕುಂದುವಾಡ, ಬದ್ರಿನಾಥ್, ಮಹೇಶ್, ನಿಂಗರಾಜ್, ಶಿವಮೂರ್ತಿ, ಸುರೇಶ್, ಅಜಯ್ ಸೇರಿದಂತೆ ಮತ್ತಿತರರಿದ್ದರು.- - -
-28ಕೆಡಿವಿಜಿ33:ವರದಿಗಾರರ ಮೇಲೆ ಎಎಸ್ಪಿ ದರ್ಪ ಎಸಗಿದ್ದು, ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಐಜಿಪಿಗೆ ದೂರು ಸಲ್ಲಿಸಲಾಯಿತು.