ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮೊದಲ ಹಂತದ ಸಂಪುಟದಲ್ಲೇ ಸ್ಥಾನ ಪಡೆಯಲು ಆಕಾಂಕ್ಷಿಗಳು ತೀವ್ರ ಕಸರತ್ತು ನಡೆಸುತ್ತಿದ್ದು, ಸೋಮವಾರ ದೆಹಲಿಗೆ ತೆರಳಿ ಲಾಬಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮೊದಲ ಹಂತದ ಸಂಪುಟದಲ್ಲಿ ಯಾರ್‍ಯಾರನ್ನು ಪರಿಗಣಿಸಬೇಕು ಎಂಬ ಬಗ್ಗೆ ಹೆಸರುಗಳನ್ನು ಅಖೈರುಗೊಳಿಸಲು ದೆಹಲಿಗೆ ಸೋಮವಾರ ಬೆಳಗ್ಗೆ ತೆರಳಿದ್ದಾರೆ.

ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಬೇಕಿರುವುದರಿಂದ ಸೋಮವಾರವೇ ಪಟ್ಟಿ ಅಂತಿಮಗೊಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು. ಇದೇ ವೇಳೆ ಆಕಾಂಕ್ಷಿಗಳಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್‌, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎ.ಎಸ್.ಪೊನ್ನಣ್ಣ ಸೇರಿ ಹಲವರು ಸಿದ್ದರಾಮಯ್ಯ, ಶಿವಕುಮಾರ್‌ ಜತೆಯಲ್ಲೇ ದೆಹಲಿಗೆ ತೆರಳಿದ್ದಾರೆ.

ಏರ್ಪೋರ್ಟಿಂದಲೇ ಜಮೀರ್‌ ವಾಪಸ್‌:


ಈ ಸಂದರ್ಭದಲ್ಲಿ ದೆಹಲಿಗೆ ತೆರಳಲು ಎಚ್‌ಎಎಲ್‌ವರೆಗೂ ಸಿದ್ದರಾಮಯ್ಯ ಅವರ ಜತೆಯಲ್ಲೇ ತೆರಳಿದ್ದ ಜಮೀರ್ ಅಹ್ಮದ್‌ಖಾನ್‌ ಅವರು ಆಡಿಯೋ ವೈರಲ್‌ ವಿವಾದಕ್ಕೆ ಸಿಲುಕಿ ವಾಪಸಾಗಿದ್ದಾರೆ. ಈ ಸಮಯದಲ್ಲಿ ನೀವು ನಮ್ಮೊಂದಿಗೆ ದೆಹಲಿಗೆ ಬರುವುದು ಬೇಡ ಎಂದು ಸಿದ್ದರಾಮಯ್ಯ ಅವರೇ ಸಲಹೆ ನೀಡಿದರು ಎನ್ನಲಾಗಿದೆ.

ಇದರ ಹೊರತಾಗಿಯೂ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸತೀಶ್ ಜಾರಕಿಹೊಳಿ, ಶಿವರಾಜ್‌ ತಂಗಡಗಿ, ಸಚಿವ ಸ್ಥಾನದ ಆಕಾಂಕ್ಷಿಗಳಾದ ಚಲುವರಾಯಸ್ವಾಮಿ, ಬಿ.ಆರ್.ಪಾಟೀಲ್‌, ಎನ್‌.ಎ.ಹ್ಯಾರಿಸ್‌, ವಿಜಯಾನಂದ ಕಾಶಪ್ಪನವರ್‌, ಬಿ.ಕೆ.ಹರಿಪ್ರಸಾದ್, ಬಸವನಗೌಡ ದದ್ದಲ್, ರಾಘವೇಂದ್ರ ಹಿಟ್ನಾಳ್, ಶಿವಾನಂದ ಪಾಟೀಲ್, ಅಶೋಕ್ ಪಟ್ಟಣ್, ಪ್ರದೀಪ್‌ ಈಶ್ವರ್ ಅವರು ದೆಹಲಿಗೆ ತೆರಳಿದ್ದಾರೆ. ದಿನೇಶ್ ಗೂಳಿಗೌಡ ಸೇರಿ ಕೆಲ ಪರಿಷತ್‌ ಸದಸ್ಯರೂ ದೆಹಲಿ ತಲುಪಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ ಶಾಸಕರು:

ಮತ್ತೊಂದೆಡೆ ಬೆಂಗಳೂರಿನಲ್ಲಿ ಹಲವರು ಶಾಸಕರು ಸಂಪುಟ ಸೇರ್ಪಡೆ ಇಂಗಿತ ವ್ಯಕ್ತಪಡಿಸಿದ್ದಾರೆ. ಯು.ಟಿ.ಖಾದರ್‌ ಅವರು ನನ್ನ ಕೆಲಸ ನೋಡಿ ಜವಾಬ್ದಾರಿ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ತರೀಕೆರೆ ಶ್ರೀನಿವಾಸ್, ಎನ್‌.ಎ.ಹ್ಯಾರಿಸ್‌, ರೂಪಕಲಾ ಶಶಿಧರ್, ಶಿವಲಿಂಗೇಗೌಡ ಸೇರಿ ಹಲವರು ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದೆಹಲಿ ಅಂಗಳದಲ್ಲಿ ಸಂಪುಟ ಕಸರತ್ತು:

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಮಂತ್ರಿಮಂಡಲ ರಚನೆಯ ಕಸರತ್ತು ಬಿರುಸು ಪಡೆದಿದೆ. ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮದೇ ಆದ ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ, ಸಚಿವರ ಪಟ್ಟಿ ಅಂತಿಮಗೊಳಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಮತೋಲಿತ ಸಂಪುಟ ರಚನೆ ಮತ್ತು ಜಾತಿವಾರು ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಯತ್ನಗಳು ಮುಂದುವರಿದಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ರಾಜಾಜಿಮಾರ್ಗ್‌ದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪಾಲ್ಗೊಳ್ಳಲಿದ್ದಾರೆ. ರಾಹುಲ್‌, ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಸಂಭಾವ್ಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಸಂಪುಟದಲ್ಲಿ ಯಾರಿಗ್ಯಾರಿಗೆ ಸ್ಥಾನ ನೀಡಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬುದರ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.ಈ ಮಧ್ಯೆ, ಸೋಮವಾರ ಸಂಜೆ ಕೆ.ಸಿ.ವೇಣುಗೋಪಾಲ ಅವರ ನಿವಾಸಕ್ಕೆ ಆಗಮಿಸಿದ ಸುರ್ಜೇವಾಲ, ಸಂಪುಟ ರಚನೆ ಸಂಬಂಧ ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದರು. ಪಕ್ಷದ ಮೂಲಗಳ ಪ್ರಕಾರ, ಸಂಪುಟ ರಚನೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲು ನಾಯಕರು ತೀರ್ಮಾನಿಸಿದ್ದಾರೆ. ಜೂ.3ರಂದು ಮೊದಲ ಹಂತದಲ್ಲಿ ಸಿಎಂ ಸೇರಿದಂತೆ ಸುಮಾರು 8-10 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಾಂಗ್ರೆಸ್ ಹೈಕಮಾಂಡ್ 2 ಒಬಿಸಿ, 2 ಎಸ್‌ಸಿ, 1 ಎಸ್‌ಟಿ, 2 ಒಕ್ಕಲಿಗರು, 1 ಮುಸ್ಲಿಂ ಸಮುದಾಯ, 2 ಲಿಂಗಾಯತರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಈ ಜಾತಿವಾರು ಪ್ರಾತಿನಿಧ್ಯದ ಮೂಲಕ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿಕೊಂಡು ಹೋಗುವ ಯತ್ನ ನಡೆಯುತ್ತಿದೆ. ಸಿದ್ದರಾಮಯ್ಯನವರ ಆಪ್ತರಲ್ಲಿ ಕೆಲವರಿಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡುವ ಮೂಲಕ ಆಡಳಿತದಲ್ಲಿ ಹಿಡಿತ ಸಾಧಿಸಲು ಡಿಕೆಶಿ ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಉಳಿದ 20-24 ಸಚಿವ ಸ್ಥಾನಗಳನ್ನು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ನಂತರ ಭರ್ತಿ ಮಾಡಲಾಗುವುದು. ಇದರಿಂದಾಗಿ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳುವುದನ್ನು ತಪ್ಪಿಸಲು ಮತ್ತು ಸಂಭಾವ್ಯ ಬಂಡಾಯವನ್ನು ಶಮನ ಮಾಡಲು ಹೈಕಮಾಂಡ್ ಯೋಜಿಸಿದೆ ಎನ್ನಲಾಗಿದೆ.ಮಾತುಕತೆ ವೇಳೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಕುರಿತಾಗಿಯೂ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಚಿವಾಕಾಂಕ್ಷಿಗಳಿಂದ ಡಿಕೆಶಿ ಭೇಟಿ:ಈ ಮಧ್ಯೆ, ಸಚಿವಾಕಾಂಕ್ಷಿಗಳ ದಂಡೇ ದೆಹಲಿಗೆ ತೆರಳಿದ್ದು, ಡಿಕೆಶಿ, ಸಿದ್ದು, ವರಿಷ್ಠರನ್ನು ಭೇಟಿ ಮಾಡಿ, ಸಂಪುಟ ಸೇರುವ ಬಗ್ಗೆ ತೀವ್ರ ಲಾಬಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಸೋಮವಾರ ಕರ್ನಾಟಕ ಭವನಕ್ಕೆ ತೆರಳಿ, ಡಿಕೆಶಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಪರಿಷತ್ ಸದಸ್ಯ, ಮುಖ್ಯ ಸಚೇತಕ ಸಲೀಂ ಅಹ್ಮದ್ ಕೂಡ ಡಿಕೆಶಿಯನ್ನು ಭೇಟಿ ಮಾಡಿ, ಸಂಪುಟ ಸೇರುವ ಸಂಬಂಧ ಚರ್ಚೆ ನಡೆಸಿದರು.