ವಕೀಲರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಹಾಡಹಗಲೇ ವಕೀಲರ ಮೇಲೆ ಕೊಲೆ ಹಾಗೂ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳಾಗಿವೆ. ನ್ಯಾಯಕ್ಕಾಗಿ ಹೋರಾಡುವ ವಕೀಲರೇ ಭಯದ ವಾತಾವರಣದಲ್ಲಿ ಬದುಕುವಂತಾಗಿರುವುದು ದುರದೃಷ್ಟಕರ ಎಂದು ಜಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ವಿ.ನಾಗಪ್ಪ ಹೇಳಿದ್ದಾರೆ.
- ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ: ಸೂಕ್ತ ಭದ್ರತೆಗೆ ಆಗ್ರಹ
- - -ಕನ್ನಡಪ್ರಭ ವಾರ್ತೆ ಜಗಳೂರು
ವಕೀಲರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಹಾಡಹಗಲೇ ವಕೀಲರ ಮೇಲೆ ಕೊಲೆ ಹಾಗೂ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳಾಗಿವೆ. ನ್ಯಾಯಕ್ಕಾಗಿ ಹೋರಾಡುವ ವಕೀಲರೇ ಭಯದ ವಾತಾವರಣದಲ್ಲಿ ಬದುಕುವಂತಾಗಿರುವುದು ದುರದೃಷ್ಟಕರ ಎಂದು ಜಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ವಿ.ನಾಗಪ್ಪ ಹೇಳಿದರು.ಬೆಂಗಳೂರಿನ ವೈಟ್ಫೀಲ್ಡ್ನ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಮತ್ತು ಮಂಜುನಾಥ್ ಅವರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲಿನ ಕೊಲೆ ಯತ್ನವನ್ನು ಖಂಡಿಸಿ ವಕೀಲರ ಸಂಘದ ಅಧ್ಯಕ್ಷ ಡಿ.ವಿ.ನಾಗಪ್ಪ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಂತರ ಅವರು ಮಾತನಾಡಿದರು.
ವಕೀಲರು ಯಾವುದೇ ಭಯ, ಬೆದರಿಕೆ ಹಾಗೂ ಒತ್ತಡವಿಲ್ಲದೆ ತಮ್ಮ ವೃತ್ತಿ ಕರ್ತವ್ಯ ನಿರ್ವಹಿಸಲು ಪೂರಕವಾದ ಸುರಕ್ಷಿತ ವಾತಾವರಣ ನಿರ್ಮಿಸಬೇಕು. ವಕೀಲರ ಜೀವ ಮತ್ತು ವೃತ್ತಿ ಗೌರವಕ್ಕೆ ರಕ್ಷಣೆ ನೀಡಲು ಅಸ್ತಿತ್ವದಲ್ಲಿರುವ ವಕೀಲರ ರಕ್ಷಣಾ ಕಾಯಿದೆ ಮತ್ತಷ್ಟು ಪರಿಣಾಮಕಾರಿ ಕಾನೂನು ನಿಬಂಧನೆಗಳೊಂದಿಗೆ ಬಲಪಡಿಸಬೇಕು ಎಂದು ಆಗ್ರಹಿಸಿದರು.ಸಂಘದ ಕಾರ್ಯದರ್ಶಿ ಬಿ.ಪಿ.ಓಂಕಾರಪ್ಪ ಮಾತನಾಡಿ, ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಕೃತ್ಯ ಎಸಗುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂಬ ಉದ್ದೇಶದಿಂದ ಸಂಘದ ಸರ್ವ ಸದಸ್ಯರು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ವಕೀಲರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ವಕೀಲರ ಸಂಘದ ಮಾಜಿ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಪಿ.ಬಸವರಾಜ್, ಕರಿಬಸಪ್ಪ, ಅಂಜಿನಪ್ಪ, ನಾಗೇಶ್, ತಿಪ್ಪೇಸ್ವಾಮಿ, ಭೂಪತಿ, ವೆಂಕಟೇಶ್, ಅರುಣ್ಕುಮಾರ್, ಸುನೀಲ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.- - -
-03ಜೆ.ಜಿ.ಎಲ್.1: ಜಗಳೂರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ವಿವಿಧೆಡೆ ವಕೀಲರ ಮೇಲಿನ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದರು.