ಮಂಗಳಮುಖಿಯರಿಂದ ಮಾರಣಾಂತಿಕ ಹಲ್ಲೆ, ಬಂಧನ

| Published : Nov 24 2024, 01:49 AM IST

ಸಾರಾಂಶ

ಮಂಗಳಮುಖಿ ವೇಷ ಧರಿಸಿಕೊಂಡು ನಿತ್ಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ.

ಮುಂಡಗೋಡ:

ಹಣ ನೀಡುವಂತೆ ಅಂಗಡಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ನಡೆಸಿ ಮಗು ಸೇರಿದಂತೆ ಹಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರು ಜನ ಮಂಗಳ ಮುಖಿಯರನ್ನು ಮುಂಡಗೋಡ ಪೊಲೀಸರು ಬಂಧಿಸಿದ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಶಿವಾಜಿ ಸರ್ಕಲ್ ಬಳಿಯ ಪಾನ್‌ಶಾಪ್‌ಗೆ ಶುಕ್ರವಾರ ಬಂದಿದ್ದ ಮಂಗಳಮುಖಿಯರು ₹ 100 ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅಂಗಡಿ ಮಾಲೀಕ ₹ ೧೦ ನೀಡಿದಾಗ ಅದನ್ನು ವಾಪಸ್ ನೀಡಿದ್ದು, ಪಾನ್‌ಶಾಪ್ ಮಾಲೀಕ ರಾಜು ನಿಡಗುಂದಿ ಹಾಗೂ ಮಂಗಳಮುಖಿಯರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಮತ್ತೆ ಸುಮಾರು ೭-೮ ಜನ ಮಂಗಳಮುಖಿಯರ ತಂಡದೊಂದಿಗೆ ಪಾನ್‌ಶಾಪ್‌ಗೆ ನುಗ್ಗಿ ಗ್ಲಾಸ್ ಮುಂತಾದ ವಸ್ತುಗಳನ್ನು ದ್ವಂಸಗೊಳಿಸಿದ್ದಾರೆ. ರಾಜು ನಿಡಗುಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಅವರ ಪತ್ನಿ, ತಾಯಿ, ಸಹೋದರ ಹಾಗೂ ೩ ವರ್ಷದ ಪುಟ್ಟ ಮಗುವಿನ ಮೇಲೂ ಕೂಡ ಮಾರಣಾಂತಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆ ಕೂಡ ಹಲ್ಲೆಗೆ ಯತ್ನಿಸಿದ್ದಾರಲ್ಲದೇ, ಪತ್ರಕರ್ತರ ಮೇಲೆ ಸಹ ದಾಳಿ ಮಾಡಿ ಗೂಂಡಾ ವರ್ತನೆ ತೋರಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು, ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ದಬ್ಬಾಳಿಕೆ ನಡೆಸಿದ ಮಂಗಳಮುಖಿಯರನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

ಮಂಗಳಮುಖಿ ವೇಷ ಧರಿಸಿಕೊಂಡು ನಿತ್ಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು. ಸಿಪಿಐ ರಂಗನಾಥ ನೀಲಮ್ಮನವರ ಮಧ್ಯ ಪ್ರವೇಶಿಸಿ ಪೊಲೀಸರ ಮೇಲೆ ಕೂಡ ಮಂಗಳಮುಖಿಯವರು ಹಲ್ಲೆಗೆ ಯತ್ನಿಸಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಹಲ್ಲೆಗೊಳಗಾದವರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗಾಯಾಳು ರಾಜು ನಿಡಗುಂದಿ ಪತ್ನಿ ಲತಾ, ೩ ವರ್ಷದ ಮಗು ಸಾತ್ವಿಕಾ, ತಾಯಿ ಗಾಯತ್ರಿ, ಸಹೋದರ ಶಿವಪ್ರಕಾಶ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿ ಡಿವೈಎಸ್‌ಪಿ ಕೆ.ಎಲ್. ಗಣೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೂರು ದಾಖಲು:

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಮಂಗಳಮುಖಿಯರಾದ ಹುಬ್ಬಳ್ಳಿಯ ನೇಕಾರ ನಗರದ ನೂರಾಣಿ ಪ್ಲಾಟ್‌ನ ನಿವಾಸಿಗಳಾದ ನಕ್ಷತ್ರಾ ಗುರುನಾಥ ಜಕ್ಕಲಿ, ವರುಣ ಬಸವರಾಜ ಗದಗ, ಮಾಬೂಬ್‌ ಸವಣೂರು, ಸನಂ ದಾವಣಗೆರೆ, ಪ್ರೀತಿ ಮಾಬುಸಾಬ್‌ ಶಾಡಗುಪ್ಪಿ, ಜಾನಕಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಜತೆಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಕುರಿತು ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಸಿಪಿಐ ರಂಗನಾಥ ತಿಳಿಸಿದ್ದಾರೆ.