ನಿರ್ವಾಹಕನ ಮೇಲೆ ಹಲ್ಲೆ: ಅಥಣಿ ಪಟ್ಟಣದಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ತ ಡೆದು ಆಕ್ರೋಶ

| N/A | Published : Feb 23 2025, 12:35 AM IST / Updated: Feb 23 2025, 12:49 PM IST

ನಿರ್ವಾಹಕನ ಮೇಲೆ ಹಲ್ಲೆ: ಅಥಣಿ ಪಟ್ಟಣದಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ತ ಡೆದು ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ ಪಟ್ಟಣದಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಾಳೆಕುಂದ್ರಿ ಪ್ರಕರಣವನ್ನು ಖಂಡಿಸಿದರು.

 ಅಥಣಿ:  ಪಂಥಬಾಳೆ ಕುಂದ್ರಿ ಗ್ರಾಮದಲ್ಲಿ ಸಾರಿಗೆ ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ನಡೆಸಿದ ಹಲ್ಲೆ ಪ್ರಕರಣವನ್ನು ಖಂಡಿಸಿ ಅಥಣಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿ ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರ ವಿರುದ್ಧ ದಿಕ್ಕಾರ ಕೂಗಿದರು.

ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಮಾತನಾಡಿ, ಮರಾಠಿ ಪುಂಡರಿಂದ ಕನ್ನಡದ ನೆಲದಲ್ಲಿಯೇ ಕನ್ನಡಿಗನ ಮೇಲೆ ಅನ್ಯಾಯವಾದಾಗ ಕರವೇ ಎಂದು ಸಹಿಸುವುದಿಲ್ಲ. ಮರಾಠಿ ಪುಂಡರಿಂದ ಹಲ್ಲೆಗೊಳಗಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಂದಿರುವ ನಮ್ಮ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರ ವಿರುದ್ಧ ಗಾಯದ ಮೇಲೆ ಬರೆ ಎಳೆದಂತೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸುವುದು ಯಾವ ನ್ಯಾಯ?, ರಾಜಕೀಯ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ದಾಖಲಿಸಿರುವ ಈ ಪ್ರಕರಣ ಕೂಡಲೇ ಹಿಂಪಡೆಯಬೇಕು. ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ಕರವೇ ತಾಲೂಕು ಅಧ್ಯಕ್ಷ ಉದಯ ಮಾಕಾಣಿ ಮಾತನಾಡಿ, ನನಗೆ ಮರಾಠಿ ಮಾತನಾಡಲು ಬರಲ್ಲ, ನೀವು ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್‌ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿರುವುದು ಖಂಡನೀಯ. ಕೂಡಲೇ ಈ ಪ್ರಕರಣ ಹಿಂಪಡೆಯಬೇಕು. ಮಹಾರಾಷ್ಟ್ರ ನೆಲದಲ್ಲಿ ಕರ್ನಾಟಕ ಸಾರಿಗೆ ಬಸ್‌ಗಳಿಗೆ ಅವಮಾನಿಸುತ್ತಿರುವ ಎಂಇಎಸ್ ಮತ್ತು ಶಿವ ಸೇನಾ ಕಾರ್ಯಕರ್ತರ ಪುಂಡಾಟಿಕೆ ಹತ್ತಿಕ್ಕಬೇಕು. ಕನ್ನಡ ನೆಲದಲ್ಲಿದ್ದು ನಾಡ ದ್ರೋಹಿ ಕೆಲಸ ಮಾಡುತ್ತಿರುವ ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನ ನಿಷೇಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಜಗನ್ನಾಥ ಭಾಮನೆ ಮಾತನಾಡಿ, ನಮ್ಮ ಸಾರಿಗೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವ ಬದಲಿಗೆ, ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಸರಿಯಲ್ಲ. ಜನರು ತುಂಬಿದ ಬಸ್ ನಲ್ಲಿ ಹಿರಿಯ ವಯಸ್ಸಿನ ನಿರ್ವಾಹಕರು ಆ ಬಾಲಕಿಯನ್ನು ಹೇಗೆ ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯ?, ಈ ರೀತಿ ಕಾನೂನು ದುರುಪಯೋಗವಾದರೆ ಸಾರಿಗೆ ನೌಕರರು ಕರ್ತವ್ಯ ಹೇಗೆ ನಿರ್ವಹಿಸಬೇಕು. ಈ ಪ್ರಕರಣದಿಂದ ಪೊಲೀಸರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಇದು ರಾಜಕೀಯ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣದ ಕಲಿಸುವುದು ಯಾವ ನ್ಯಾಯ, ಕೂಡಲೇ ಈ ಪ್ರಕರಣವನ್ನು ರದ್ದುಪಡಿಸಿ, ಓಡಿ ಹೋಗಿರುವ ಕಿಡಿ ಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಜಮಾಯಿಸಿದ್ದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ರಾಜ್ಯದ ಸಾರಿಗೆ ಬಸ್ ತಡೆದು ಅದಕ್ಕೆ ಕನ್ನಡ ಬಾವುಟಗಳನ್ನು ಕಟ್ಟಿ ಕನ್ನಡಿಗರಿಗೆ ಆಗುವ ಅನ್ಯಾಯ ನಾವು ಸಹಿಸುವುದಿಲ್ಲ. ಕರ್ನಾಟಕ ಸಾರಿಗೆ ಬಸ್ ಗಳಿಗೆ ಭಗವಧ್ವಜಗಳನ್ನು ಕಟ್ಟಿ ಪುಂಡಾಟಿಕೆ ಮೆರೆಯುತ್ತಿರುವ ಶಿವಸೇನಾ ಹಾಗೂ ಎಂಇಎಸ್ ಕಾರ್ಯಕರ್ತರ ವಿರುದ್ಧ ಕರವೇ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು.

ನಂತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕರವೇ ಹೋರಾಟಗಾರರೊಂದಿಗೆ ಚರ್ಚಿಸಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.

ಈ ವೇಳೆ ಕರವೇ ಚಿಕ್ಕೋಡಿ ಜಿಲ್ಲಾಧ್ಯಕ್ಷ ವಿನಯ್ ಪಾಟೀಲ, ಅನಿಲ ಒಡೆಯರ, ಮಹಾಂತೇಶ್ ಹಲವಾಯಿ, ಸತೀಶ್ ಯಲ್ಲಟ್ಟಿ, ಮುತ್ತುರಾಜ ಗೊಲ್ಲರ, ಅನಿಲ್ ಪಾಟೀಲ, ಪ್ರವೀಣ್ ಲಂಗೋಟಿ, ಮಲ್ಲಯ್ಯ ಮಠಪತಿ, ಜಿಶಾನ್ ಮುಜಾವರ, ಮಹಾಂತೇಶ್ ಬಡಚಿ, ಗಿರೀಶ್ ಭಾವನೆ ಸೇರಿ ಇತರರಿದ್ದರು.