ಕರ್ತವ್ಯ ನಿರತ ಪಿಎಸ್‌ಐ ಸವಿತಾರ ಮೇಲೆ ಹಲ್ಲೆ ನಡೆಸಿದ ಶಾಸಕರ ಪುತ್ರಿ ಐಶ್ವರ್ಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ, ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ನೀಡಿದ್ದರೂ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮಂಡ್ಯ:

ಕರ್ತವ್ಯ ನಿರತ ಪಿಎಸ್‌ಐ ಸವಿತಾರ ಮೇಲೆ ಹಲ್ಲೆ ನಡೆಸಿದ ಶಾಸಕರ ಪುತ್ರಿ ಐಶ್ವರ್ಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಪಕ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಐಶ್ವರ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣ ಆಕೆಯನ್ನು ಬಂಧಿಸುವಂತೆ ಆಗ್ರಹಿಸಿದರು.

ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ನೀಡಿದ್ದರೂ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಯನ್ನು ಈವರೆವಿಗೂ ಏಕೆ ಬಂಧಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ. ಘಟನೆ ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾನೂನು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಾರ್ವಜನಿಕರಲ್ಲಿ ಉಳಿಸುವುದು ಅತ್ಯಂತ ಅಗತ್ಯ. ಕರ್ತವ್ಯನಿರತ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಪ್ರಕರಣದಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ, ಜಲ್ಲಾಧ್ಯಕ್ಷ ಮಲ್ಲೇಶ್, ಮುಖಂಡರಾದ ಮಹಾದೇವಮ್ಮ, ಪ್ರಮೋದ್, ನಾಗರಾಜ್ ಶಿವಪುರ, ಯೋಗೇಶ್, ಅನಿತಾ, ಕೆಂಪಮ್ಮ, ವೆಂಕಟೇಶ್, ಶಾಂತಮ್ಮ, ಶೃತಿ ಇತರರು ಪಾಲ್ಗೊಂಡಿದ್ದರು. ಜಿಪಂ ಎದುರು ಅಹೋರಾತ್ರಿ ಧರಣಿ: ಕೆ.ಟಿ.ಶ್ರೀಕಂಠೇಗೌಡ ಬೆಂಬಲಮಂಡ್ಯ:ನಗರದ ಜಿಪಂ ಆವರಣದಲ್ಲಿ ರೈತ ಮತ್ತು ಪ್ರಗತಿಪರ ಸಂಘಟನೆಗಳ ನಡೆಸುತ್ತಿರುವ ಸಿಇಓ ನಂದಿನಿ ಹಠವೋ ಮಂಡ್ಯ ಜಿಲ್ಲಾ ಪಂಚಾಯ್ತಿ ಬಚಾವೋ ಅಹೋರಾತ್ರಿ ಧರಣಿಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬೆಂಬಲಿಸಿ ಪಾಲ್ಗೊಂಡರು.

ನಂತರ ಮಾತನಾಡಿದ ಅವರು, ಕಬ್ಬಿಣ ಮಾರಾಟದ ಬಗ್ಗೆ ಕೆಲವು ತಿಂಗಳಿನಿಂದ ಜಿಪಂನವರು ಮಾಹಿತಿ ಕೊಡದೆ ಇರುವುದರಿಂದ ಅನಿವಾರ್ಯವಾಗಿ ಹೋರಾಟ ಮಾಡಬೇಕಾದ ಸಂದರ್ಭ ಬಂದಿದೆ. ಕೂಡಲೇ ಸರ್ಕಾರ ತನಿಖೆ ನಡೆಸಿ ತಪಿತ್ಥಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.ರೈತ ಮುಖಂಡ ಗಾಣದಾಳು ಜಯರಾಮ ಮಾತನಾಡಿ, ಕೆಲವು ತಿಂಗಳಿನಿಂದ ಜಿಪಂ ಆವರಣದಿಂದ ಕಬ್ಬಿಣ ಸಾಗಿಸಿರುವ ಬಗ್ಗೆ ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳು ನೀಡದೆ ಸತಾಯಿಸುತ್ತಿದ್ದಾರೆ. ಅಲ್ಲದೇ, ಕಬ್ಬಿಣ ಮಾರಿರುವ ಬಗ್ಗೆ ಸರ್ಕಾರಕ್ಕೆ ಹಣ ಜಮೆ ಮಾಡಿರುವ ವಿವರಗಳನ್ನು ನೀಡುತ್ತಿಲ್ಲ ಎಂದು ದೂರಿದರು.

ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಸಾತನೂರು, ಭ್ರಷ್ಟಾಚಾರ ವಿರೋಧ ವೇದಿಕೆ ರಾಜ್ಯ ಉಪಾಧ್ಯಕ್ಷ ಜಯರಾಮ್, ರೈತ ಸಂಘದ ಕಾರ್ಯದರ್ಶಿ ಆನಂದ್ ಕುಮಾರ್, ರಾಮಲಿಂಗೇಗೌಡ, ಚಾಮರಾಜು,ರುದ್ರೇಶ್, ರಾಣಿ, ಲೀಲಾವತಿ, ಚಲುವಣ್ಣ, ಮರಿಯಪ್ಪ,ಚಿಕ್ಕ ಮರಿಗೌಡ, ಹಲವರು ಇದ್ದರು.