ಸಾರಾಂಶ
ಇಷ್ಟರಲ್ಲಿಯೇ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರ ಚರ್ಚಾ ವಿಷಯಗಳು ವಿಸ್ತರಿಸುತ್ತಿದ್ದು, ಪಕ್ಷ ಸಂಘಟನೆ, ಟಿಕೆಟ್ ಪ್ರಯತ್ನದ ಜೊತೆಗೆ ಯಾವ ಪಕ್ಷದ ಸರ್ಕಾರದವರು ಏನು ಮಾಡಿದ್ದಾರೆ ಎನ್ನುವ ಸಂಗತಿಗಳು ಚರ್ಚೆಯಾಗುತ್ತಿವೆ.
ರಾಮಕೃಷ್ಣ ದಾಸರಿ
ರಾಯಚೂರು: ಇಷ್ಟರಲ್ಲಿಯೇ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರ ಚರ್ಚಾ ವಿಷಯಗಳು ವಿಸ್ತರಿಸುತ್ತಿದ್ದು, ಪಕ್ಷ ಸಂಘಟನೆ, ಟಿಕೆಟ್ ಪ್ರಯತ್ನದ ಜೊತೆಗೆ ಯಾವ ಪಕ್ಷದ ಸರ್ಕಾರದವರು ಏನು ಮಾಡಿದ್ದಾರೆ ಎನ್ನುವ ಸಂಗತಿಗಳು ಚರ್ಚೆಯಾಗುತ್ತಿವೆ.
ಇದರಡಿಯಲ್ಲಿಯೇ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಬಜೆಟನ್‌ಲ್ಲಿ ರಾಯಚೂರು ಜಿಲ್ಲೆಯ ನಿರೀಕ್ಷೆಗಳೇನಿದ್ದವು, ಸಿಕ್ಕಿದ್ದೇನು? ಹಿಂದಿನ ಸರ್ಕಾರ ಏನು ಕೊಟ್ಟಿದೆ. ಈಗಿನ ಸರ್ಕಾರ ಎಷ್ಟರಮಟ್ಟಿಗೆ ಜಿಲ್ಲೆಗೆ ಆದ್ಯತೆ ನೀಡಿದೆ ಎನ್ನುವ ಸಂಗತಿಗಳು ತುಲನಾತ್ಮಕ ಚರ್ಚೆಗೆ ದಾರಿಮಾಡಿಕೊಟ್ಟಿವೆ.
ಫೆ.1ರಂದು ಕೇಂದ್ರದ ಬಿಜೆಪಿ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು.
ಆದರೆ ಈ ವಿಚಾರದಲ್ಲಿ ಕೇಂದ್ರವು ಮತ್ತೊಮ್ಮೆ ನಿರಾಸೆ ಮೂಡಿಸಿತು. ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ರಾಜ್ಯ ಸರ್ಕಾರದ ಮಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಕೇಂದ್ರಕ್ಕೆ ಮೂರು ಸಲ ಪತ್ರ ಬರೆದಿದ್ದರು.
ನಿಯೋಗವು ಸಹ ಭೇಟಿಯಾಗಿ ರಾಯಚೂರಿಗೆ ಏಮ್ಸ್ ನೀಡುವುದರ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಕೇಂದ್ರ ಬಜೆಟ್‌ನಲ್ಲಿ ಮನ್ನಣೆ ಸಿಗಲಿಲ್ಲ.
ಇಷ್ಟೇ ಅಲ್ಲದೇ ನನೆಗುದಿಗೆ ಬಿದಿರುವ ಜಿಲ್ಲೆಯ ರೈಲ್ವೆ ಯೋಜನೆಗಳಾದ ಮುನಿರಾಬಾದ-ಮೆಹಬೂಬ್ ನಗರ ಹಾಗೂ ಗದಗ ಮತ್ತು ವಾಡಿಯ ರೈಲ್ವೆ ಮಾರ್ಗದ ಕಾಮಗಾರಿ ಕಾಯಕಲ್ಪ ಕಲ್ಪಿಸಿಕೊಡಲು ಅನುದಾನ, ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳುವ ವಿಚಾರದ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪನೆಯಾಗಿಲ್ಲ ಇದು ಜಿಲ್ಲೆ ಜನರಲ್ಲಿ ಬೇಸರವನ್ನುಂಟು ಮಾಡಿರುವುದು, ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಏಮ್ಸ್ ಘೊಷಣೆ ಮಾಡದೇ ಬೇಡವಾದ ಅಗತ್ಯವಿಲ್ಲದ ಏಮ್ಸ್ ಮಾದರಿ ಘೋಷಿಸಿರುವ ವಿಷಯಗಳು ಲೋಕಸಭೆ ಚುನಾವಣೆ ಪೂರ್ವದಲ್ಲಿ ಚರ್ಚೆಗೆ ನಾಂದಿಯನ್ನಾಡಿವೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ತಮ್ಮ 15ನೇ ಬಜೆಟ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರಾಯಚೂರು ಜಿಲ್ಲೆಗೆ ಆದ್ಯತೆ ನೀಡದಿದ್ದರು ಸಹ ಸಮಧಾನಕರ ಬಹುಮಾನ ಮಾದರಿಯಲ್ಲಿ ಜಿಲ್ಲೆಯನ್ನು ಪರಿಗಣಿಸಿರುವುದು ವಿಶೇಷವಾಗಿದೆ. ಜಿಲ್ಲೆಯ ಇಬ್ಬರು (ಉಸ್ತುವಾರಿ ಸೇರಿ) ಸಚಿವರು, ನಾಲ್ಕು ಜನ ಶಾಸಕರು ಇವರಲ್ಲಿ ಮೂರು ಜನ ನಿಗಮ ಮಂಡಳಿಗಳ ಅಧ್ಯಕ್ಷರು, ಒಬ್ಬ ವಿಧಾನ ಪರಿಷತ್ ಸದಸ್ಯರು ಇದ್ದರು ಸಹ ಜಿಲ್ಲೆಗೆ ದೊಡ್ಡದಾದ ಯೋಜನೆ, ವಿಶೇಷವಾದ ಅನುದಾನ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳ ಖ್ಯಾತಿಯ ರಾಜ್ಯ ಕಾಂಗ್ರೆಸ್ ಸರ್ಕಾರ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಆದ್ಯತೆ ನೀಡಲಿದೆ ಎನ್ನುವ ಜನರ ಭರವಸೆ ಹುಸಿಗೊಳಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.