ಫೆ.27, 28ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

| Published : Feb 19 2024, 01:30 AM IST

ಸಾರಾಂಶ

ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಫೆ.27 ಮತ್ತು 28ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.

ಬೀದರ್: ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಫೆ.27 ಮತ್ತು 28ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.

ಈ ಹಿಂದೆ ಫೆ.3 ಮತ್ತು 4ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು, ಆದರೆ ಸಮಯದ ಅಭಾವ ಹಾಗೂ ಕನ್ನಡ ಭವನದ ಉದ್ಘಾಟನೆಯ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಲಾಗಿತ್ತು.

ಬೀದರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಈಗಾಗಲೇ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರನ್ನು ಆಯ್ಕೆ ಮಾಡಲಾಗಿದ್ದು, ಈ ಹಿಂದೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಸಚಿವ ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷರನ್ನಾಗಿ ಗುರುನಾಥ ಕೊಳ್ಳೂರು ಹಾಗೂ ಕೋಶಾಧ್ಯಕ್ಷರನ್ನಾಗಿ ಬಾಬು ವಾಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ವಿವಿಧ ಉಪಸಮಿತಿಗಳನ್ನು ಸಹ ರಚಿಸಲಾಗಿದೆ.

ಸ್ಮರಣ ಸಂಚಿಕೆ: 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಾಂಸ್ಕೃತಿಕ ನಾಯಕ ಎನ್ನುವ ಸ್ಮರಣ ಸಂಚಿಕೆಯನ್ನೂ ಸಹ ಹೊರತರಲಾಗುತ್ತಿದ್ದು, ಸ್ಮರಣ ಸಂಚಿಕೆಯ ಸಂಪಾದಕರನ್ನಾಗಿ ಡಾ.ಬಸವರಾಜ ಬಲ್ಲೂರ ಅವರು ಈಗಾಗಲೇ ಸಂಚಿಕೆಯ ಸಿದ್ದತೆಯಲ್ಲಿದ್ದಾರೆ. ಆಸಕ್ತರು ತಮ್ಮ ಲೇಖನಗಳನ್ನು ಡಾ.ಬಸವರಾಜ ಬಲ್ಲೂರ ಅವರಿಗೆ ಕಳುಹಿಸಲು ಕೋರಲಾಗಿದೆ.

ಭಾಗವಹಿಸುವ ಶಿಕ್ಷಕರಿಗೆ ಓಓಡಿ: ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸುವ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ವಿಶೇಷ ಸಾಂದರ್ಭಿಕ ರಜೆಗಳನ್ನು ನೀಡಲು ಆಯಾ ಇಲಾಖೆಯ ಮುಖ್ಯಸ್ಥರು ಕ್ರಮ ಕೈಗೊಂಡಿದ್ದು, ಶಿಕ್ಷಕರು ಹಾಗೂ ಉಪನ್ಯಾಸಕರು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನದಲ್ಲಿ ಜರುಗುವ ಉಪನ್ಯಾಸಗಳ ಪ್ರಯೋಜನ ಪಡೆಯಲು ಕೋರಲಾಗಿದೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಮೆರವಣಿಗೆಯೂ ಸಹ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದ್ದು, ಆಯ್ದ ಶಾಲೆಗಳ ಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾಹಿತಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.

ಪುಸ್ತಕಗಳ ಬಿಡುಗಡೆ: ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧ ಲೇಖಕರು ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡಲು ಇಚ್ಛಿಸಿದ್ದು, ಆಸಕ್ತ ಲೇಖಕರು ತಮ್ಮ ಕೃತಿಗಳನ್ನು ಕಸಾಪ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಅವರಿಗೆ ತಲುಪಿಸಲು ಕೋರಿದ್ದಾರೆ.